ಕಮ್ಯುನಿಸ್ಟ್ ದೇಶ ಚೀನಾ ವಿಶ್ವದ ಅತ್ಯಂತ ಶ್ರೀಮಂತ(China richest Nation in World)ದೇಶವಾಗಿ ಹೊರಹೊಮ್ಮಿದೆ.
ಜಾಗತಿಕ ಹಣಕಾಸು ಸಂಸ್ಥೆ ಮೆಕ್‌ಕಿನ್ಸೆ ಬಿಡುಗಡೆ ಮಾಡಿರುವ ವರದಿಯಲ್ಲಿ, ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಳವಾದಂತೆ ಚೀನಾ ದೇಶ, ಅಮೆರಿಕವನ್ನು ಹಿಂದಿಕ್ಕಿ ಶ್ರೀಮಂತಿಕೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಮೆಕ್‌ಕಿನ್ಸೆ ಸಂಸ್ಥೆಯು 10 ದೇಶಗಳ ರಾಷ್ಟ್ರೀಯ ಲೆಕ್ಕ ಪತ್ರದ ವಿವರಗಳನ್ನು ಅಧ್ಯಯನ ಮಾಡಿದ್ದು, ಈ ದೇಶಗಳು ಜಗತ್ತಿನ ಒಟ್ಟು ಆದಾಯದ ಶೇ.60ರಷ್ಟು ಪಾಲನ್ನು ಹೊಂದಿವೆ ಎಂದು ತಿಳಿಸಿದೆ.
ಜಗತ್ತಿನ ಒಟ್ಟಾರೆ ನಿವ್ವಳ ಸಂಪತ್ತು 2000ನೇ ಇಸವಿಯಲ್ಲಿ 156 ಟ್ರಿಲಿಯನ್ ಡಾಲರ್ ಇತ್ತು. 2020ಕ್ಕೆ ಅದು 514 ಟ್ರಿಲಿಯನ್ ಡಾಲರ್‌ಗೆ ಹೆಚ್ಚಳವಾಯಿತು. ಈ ಹೆಚ್ಚಳದಲ್ಲಿ ಸುಮಾರು ಮೂರನೇ ಒಂದು ಭಾಗವನ್ನು ಚೀನಾ ಒಳಗೊಂಡಿದೆ.
ವಿಶ್ವ ವ್ಯಾಪಾರ ಸಂಘಟನೆಯೊಳಗೆ ಸೇರ್ಪಡೆಯಾಗುವ ಒಂದು ವರ್ಷದ ಮುನ್ನ, 2000ದಲ್ಲಿ 7 ಟ್ರಿಲಿಯನ್ ಡಾಲರ್ ಇದ್ದ ಚೀನಾ ಸಂಪತ್ತು, 2020ರಲ್ಲಿ 120 ಟ್ರಿಲಿಯನ್ ಡಾಲರ್‌ಗೆ ಅತಿ ವೇಗವಾಗಿ ಏರಿಕೆ ಕಂಡಿದೆ. ಇದು ಅಮೆರಿಕವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಆಸ್ತಿ ದರಗಳಲ್ಲಿ ಹೆಚ್ಚು ಏರಿಕೆ ಕಂಡಿರುವ ಅಮೆರಿಕದಲ್ಲಿ, ನಿವ್ವಳ ಸಂಪತ್ತು ಈ ಅವಧಿಯಲ್ಲಿ ಎರಡು ಪಟ್ಟಿಗೂ ಅಧಿಕವಾಗಿದ್ದು, 90 ಟ್ರಿಲಿಯನ್ ಡಾಲರ್ ಆಗಿದೆ. ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾದಲ್ಲಿ ಶೇ.10ರಷ್ಟು ಶ್ರೀಮಂತ ವ್ಯಕ್ತಿಗಳು ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಅವರ ಷೇರುಗಳು ಏರಿಕೆಯಾಗುತ್ತಲೇ ಇವೆ ಎಂದು ವರದಿ ತಿಳಿಸಿದೆ.
ಜಾಗತಿಕ ಸಂಪತ್ತಿನ ಪಟ್ಟಿಯಲ್ಲಿ ಚೀನಾ ಮತ್ತು ಅಮೆರಿಕ ಬಳಿಕ ಕ್ರಮವಾಗಿ ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಮೆಕ್ಸಿಕೋ ಮತ್ತು ಸ್ವೀಡನ್ ದೇಶಗಳು ಇವೆ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.