ಬೀಜಿಂಗ್: ಪಶ್ಚಿಮ ನಗರ ಚೆಂಗುಡುವಿನಲ್ಲಿರುವ ಕಾನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಅಮೆರಿಕಕ್ಕೆ ಚೀನಾ ಸೂಚಿಸಿದ್ದು, ಕೊರೊನಾ ಸಂದಿಗ್ಧ ಪರಿಸ್ಥಿತಿಯ ನಡುವೆ ಎರಡು ರಾಷ್ಟ್ರಗಳ ರಾಜತಾಂತ್ರಿಕ ಕಾಳಗ ತಾರಕಕ್ಕೇರಿದೆ.
ವೈದ್ಯಕೀಯ ಮತ್ತು ಇತರ ಸಂಶೋಧನೆಗಳ ಮಾಹಿತಿ ಕದಿಯಲಾಗುತ್ತಿದೆ ಎಂಬ ಆರೋಪದ ಮೇಲೆ, ಹೌಸ್ಟನ್ನಲ್ಲಿರುವ ಚೀನಾ ಕಾನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಕಳೆದ ವಾರ ಅಮೆರಿಕ ಸೂಚಿಸಿತ್ತು. ಇದಕ್ಕೆ ತಿರುಗೇಟು ಎಂಬಂತೆ, ಚೆಂಗುಡುವಿನ ಯುಎಸ್ ಕಾನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಚೀನಾ ಸೂಚಿಸಿದೆ.
ಚೀನಾ ಕಾನ್ಸುಲೇಟ್ ಕಚೇರಿ ಮುಚ್ಚಲು ಸೂಚಿಸಿರುವುದು ಅಮೆರಿಕದ ಕೆಟ್ಟ ನಿರ್ಧಾರ, ಅದನ್ನು ವಾಪಸ್ ಪಡೆಯುವಂತೆ ಚೀನಾ ವಿದೇಶಾಂಗ ಸಚಿವ ಆಗ್ರಹಿಸಿದ್ದರು. ಅಮೆರಿಕ ಮತ್ತು ಚೀನಾ ನಡುವೆ ವ್ಯವಹಾರ ನಿರ್ವಹಣೆ, ಕೊರೊನಾ ವೈರಸ್, ತಂತ್ರಜ್ಞಾನ, ಗೂಡಾಚಾರಿಕೆ, ಹಾಂಗ್ ಕಾಂಗ್ ಮತ್ತು ದಕ್ಷಿಣ ಚೀನಾ ಹಿಡಿತ ಸಾಧಿಸುವುದು, ಮುಸ್ಲಿಮರ ಮೇಲಿನ ಕಿರುಕುಳ ಸೇರಿದಂತೆ ಹಲವು ವಿಚಾರಗಳಲ್ಲಿ ಶೀತಲ ಸಮರ ನಡೆಯುತ್ತಲೇ ಇವೆ. ಇದೀಗ ಉಭಯ ರಾಷ್ಟ್ರಗಳು ಬಹಿರಂಗ ಕಾಳಗ ಶುರು ಮಾಡಿವೆ.