ನವದೆಹಲಿ: ಕಮ್ಯೂನಿಸ್ಟ್ ದೇಶ ಚೀನಾ ಮತ್ತೆ ತನ್ನ ಉದ್ಧಟತವನ್ನು ಮುಂದುವರಿಸಿದ್ದು, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಪರಿಗಣಿಸಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.
ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಭಾರತ - ಚೀನಾದ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಯಿಸಿರುವ ವಾಂಗ್, ಭಾರತ ಕಾನೂನು ಬಾಹಿರವಾಗಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿಕೊಂಡಿದೆ. ಸೇನಾ ಅನುಕೂಲತೆಗಾಗಿ ಗಡಿ ನಿರ್ಮಿಸುತ್ತಿರುವ ರಸ್ತೆ ಹಾಗೂ ಇತರ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ವಿರೋಧಿಸುತ್ತೇವೆ ಎಂದಿದ್ದಾರೆ.
ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ವಾಂಗ್ ವೆನ್ಬಿನ್ ಅವರ ಹೇಳಿಕೆಯ ವರದಿ ಮಾಡಿದ್ದು, ಸದ್ಯದ ಬಿಗುವಿನ ಪರಿಸ್ಥಿತಿಯಲ್ಲಿ ಭಾರತ ಮತ್ತು ಚೀನಾ ನಡುವಿನ ನಿರ್ಧಾರ ಅತ್ಯಂತ ಕಠಿಣವಾಗಿದೆ. ಮಾತುಕತೆ ನಡೆಸಿದರೂ ಎರಡೂ ಕಡೆ ಅದು ಪರಿಣಾಮ ಬೀರದು ಎಂದು ವಾಂಗ್ ಹೇಳಿರುವುದಾಗಿ ಟೈಮ್ಸ್ ಹೇಳಿದೆ.
ಅಣು ಬಾಂಬ್‌ಗಳನ್ನು ಹೊಂದಿರುವ ಎರಡು ಬಲಿಷ್ಠ ರಾಷ್ಟ್ರಗಳ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೂರ್ವ ಲಡಾಖ್‌ನಲ್ಲಿ ಎರಡೂ ಸೇನೆಗಳ ನಡುವೆ ನಡೆದಿದ್ದ ಮುಷ್ಠಿಕಾಳಗದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ಸೈನಿಕರು ಹತರಾಗಿದ್ದು, ಎಷ್ಟು ಮಂದಿ ಎಂಬುದು ಸ್ಪಷ್ಟವಾಗಿರಲಿಲ್ಲ. ಅಂದಿನಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿಯುತ್ತಲೇ ಬಂದಿದೆ.