ನವದೆಹಲಿ: ಕೊರೊನಾ ಕೇಂದ್ರ ಬಿಂದುವಾಗಿ ನರಳಿದ್ದ ಚೀನಾ ಮತ್ತೆ ಚೇತರಿಸಿಕೊಳ್ಳುತ್ತಿದೆ. ಖಾಲಿ ಖಾಲಿಯಾಗಿದ್ದ ಚೀನಾದ ರಸ್ತೆಗಳು ಬ್ಯುಸಿಯಾಗುತ್ತಿವೆ. ಬೀಜಿಂಗ್ ಮತ್ತೊಮ್ಮೆ ಶಾಪ್ಗಳು, ರೆಸ್ಟೋರೆಂಟ್, ಬಾರ್ ಹಾಗೂ ಕಚೇರಿಗಳು ಮತ್ತೆ ತೆರೆದಿವೆ. ಕೆಲವು ತಿಂಗಳುಗಳ ಲಾಕ್ ಡೌನ್ನಿಂದಾಗಿ ಸ್ತಬ್ಧವಾಗಿದ್ದ ಚೀನಾದಲ್ಲಿ ಮತ್ತೊಮ್ಮೆ ವ್ಯವಹಾರಗಳು ಶುರುವಾಗಲಿವೆ.
ಚೀನಾದ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಈಗ ಅಲ್ಲಿನ ಜನ ಜೀವನ ಯಥಾವತ್ತಾಗುವತ್ತ ಸಾಗುತ್ತಿದೆ. ಅಲ್ಲಿನ ಹುಬೈ ಪ್ರಾಂತ್ಯದಲ್ಲಿ ಈವರೆಗೂ ಕೂಡಾ ಲಾಕ್ಡೌನ್ ಅನ್ನು ತೆರೆವುಗೊಳಿಸದೇ ಏಪ್ರಿಲ್ 8ರವರೆಗೆ ವಿಸ್ತರಿಸಲಾಗಿದೆ. ಕೊರೊನಾ ಹರಡದಂತೆ ತಡೆಯಲು ಚೀನಾ ತೆಗೆದುಕೊಂಡ ಕ್ರಮಗಳು ಮಾತ್ರ ಅತ್ಯದ್ಭುತ ಎಂದೇ ಹೇಳಬಹುದು. ಮಾರ್ಚ್ 18ರಿಂದ ಬೀಜಿಂಗ್ನಲ್ಲಿ ಕೇವಲ 6 ಕೊರೊನಾ ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ ಅನ್ನೋದು ವಿಶೇಷ.
''ಕೊರೊನಾವನ್ನು ನಿಯಂತ್ರಿಸಿದ್ದು, ಕೊರೊನಾ ವೇಳೆ ಸಾಮಾಜಿಕ ಚಟುವಟಿಕೆಗಳನ್ನು ನಿಭಾಯಿಸಿದ ಬಗ್ಗೆ ಹಾಗೂ ರೋಗ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡುವ ಬಗ್ಗೆ ಚೀನಾ ತೆಗೆದುಕೊಂಡ ನಿರ್ಧಾರಗಳನ್ನು ಪ್ರತಿಯೊಂದು ರಾಷ್ಟ್ರವೂ ಕೂಡಾ ಗಮನಿಸಬೇಕು'' ಎಂದು ಹಾಂಕಾಂಗ್ ವಿಶ್ವವಿದ್ಯಾಲಯುದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕೀಜಿ ಫುಕುಡಾ ಹೇಳಿದ್ದಾರೆ.
ವೈರಸ್ ಹರಡುವುದನ್ನು ತಡೆಯಲು ಚೀನಾ ಎಲ್ಲಾ ವಿದೇಶಿಯರಿಗೆ ನಿರ್ಬಂಧ ಹೇರಿತ್ತು. ಬೇರೆ ರಾಷ್ಟ್ರಗಳಿಂದ ಬಂದ ಚೀನಿಯರನ್ನು ಎರಡು ವಾರಗಳ ಕಾಲ ನಿಗಾ ಇರಿಸಿತ್ತು. ಆದರೂ ರೋಗ ಮತ್ತಷ್ಟು ಹರಡುವ ಭೀತಿ ಚೀನಾ ಸರ್ಕಾರವನ್ನು ಕಾಡುತ್ತಿತ್ತು. ಈಗಲೂ ಕಾಡುತ್ತಿದೆ. ಚೀನಾದ ಆರ್ಥಿಕತೆ ಕೂಡಾ ಪಾತಾಳಕ್ಕಿಳಿದಿರೋದು ಎಲ್ಲರನ್ನೂ ಚಿಂತೆಗೀಡು ಮಾಡಿದೆ. ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಶೇಕಡಾ 10ರಷ್ಟು ಇಳಿಕೆಯಾಗಿದ್ದು 1976ರಲ್ಲಿ ಕೂಡಾ ಇದೇ ಪರಿಸ್ಥಿತಿಯಿತ್ತು ಎಂದು ಹೇಳಲಾಗುತ್ತಿದೆ.
''ಚೀನಾದಲ್ಲಿ ಹೆಚ್ಚಿನ ಜನಸಂಖ್ಯೆ ಸೋಂಕಿಗೆ ಗುರಿಯಾಗಿದ್ದ ಕಾರಣದಿಂದ ಆಗಾಗ ರೋಗ ಉಲ್ಬಣಿಸುವ ಸಾಧ್ಯತೆ ಇರುತ್ತದೆ'' ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಮತ್ತೊಬ್ಬ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಬೆನ್ ಕೌಲಿಂಗ್ ಎಚ್ಚರಿಸಿದ್ದಾರೆ. ''ಜನರನ್ನು ಮತ್ತೆ ಯಥಾವತ್ತಾದ ಜೀವನದತ್ತ ತರುವುದು, ಜೊತೆಗೆ ಚೇತರಿಕೆಗೊಂಡಿರುವ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಕ್ಲಿಷ್ಟ ವಿಚಾರ. ಜೊತೆಗೆ ನಿರ್ಬಂಧಗಳನ್ನು ತೆರವುಗೊಳಿಸುವುದು ನಿಧಾನವಾಗಿರಬೇಕು '' ಎಂದು ಗ್ಲೋಬಲ್ ಹೆಲ್ತ್ ಡ್ರಗ್ ಡಿಸ್ಕವರಿ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಿಂಗ್ ಶೆಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಚೀನಾದ ಬಹುತೇಕ ಭಾಗಗಳಲ್ಲಿ ಲಾಕ್ಡೌನ್ ಅನ್ನು ತೆರವುಗೊಳಿಸಲಾಗಿದೆ. ಸೋಂಕಿನ ಪ್ರಮಾಣ ಶೂನ್ಯ ಇರುವ ಬಹುತೇಕ ಪ್ರಾಂತ್ಯಗಳಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು ಬಾಗಿಲು ತೆರೆದಿದ್ದು, ಶಾಲೆಗೆ ವಿದ್ಯಾರ್ಥಿಗಳು ಕಾಲಿಡುವ ಮುನ್ನ ಅವರ ದೇಹದ ಉಷ್ಣತೆಯನ್ನು ಪರೀಕ್ಷಿಸಲಾಗುತ್ತದೆ. ಇನ್ನೂ ಕೆಲವೆಡೆ ವಿಶ್ವವಿದ್ಯಾಲಯಗಳು ಮುಚ್ಚಿದ್ದರೂ ಆನ್ಲೈನ್ ಪಾಠಗಳು ನಡೆಯುತ್ತಿವೆ. ನಿತ್ಯದಲ್ಲಿ ಬಳಕೆಯಾಗುವ ಜಿಮ್, ಪಬ್ಗಳು ಹಲವಾರು ನಗರಗಳಲ್ಲಿ ಮುಚ್ಚಿವೆ. ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಹಾಗೂ ಕಾರ್ಖಾನೆಯ ದ್ವಾರಗಳಲ್ಲಿ ಸಾರ್ವಜನಿಕರು, ಕಾರ್ಮಿಕರಿಗೆ ಉಷ್ಣತೆಯನ್ನು ಪರೀಕ್ಷಿಸಲಾಗುತ್ತಿದೆ.
ಚೀನಾದಿಂದ ಕೊರೊನಾ ತಡೆಯಲು ತೆಗೆದುಕೊಂಡ ಮತ್ತೊಂದು ಮಹತ್ವದ ನಿರ್ಧಾರವೆಂದರೆ ಫೀವರ್ ಕ್ಲಿನಿಕ್ಗಳನ್ನು ಬೀಜಿಂಗ್ ಸೇರಿದಂತೆ ಹಲವು ನಗರಗಳಲ್ಲಿ ಸ್ಥಾಪಿಸಿ ಎಲ್ಲ ಸಾರ್ವಜನಿಕರೂ ಕೂಡಾ ಅಲ್ಲಿ ಪಾಲ್ಗೊಳ್ಳಬೇಕೆಂದು ಆದೇಶಿಸಿದೆ. ಇಲ್ಲಿ ಎಲ್ಲರ ಕೊರೊನಾ ಸೋಂಕಿನ ಪರೀಕ್ಷೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಗಡಿ ದಾಟಿ ಬಂದವರನ್ನೂ ಕೂಡಾ ಇಲ್ಲಿ ಪರೀಕ್ಷಿಸಲಾಗುತ್ತದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಕೊರೊನಾಗೆ ಲಸಿಕೆ ಕಂಡುಹಿಡಿಯುವಲ್ಲಿ ಕೂಡಾ ಚೀನಾ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್ ಸೈನ್ಸ್ನ ಚೆನ್ ವೈ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಇವರೊಂದು ಲಸಿಕೆಯನ್ನು ಕಂಡುಹಿಡಿದಿದ್ದು, ಈ ವರ್ಷದ ಅಂತ್ಯಕ್ಕೆ ಪ್ರಯೋಗಕ್ಕೆ ಒಳಪಡಿಸುವ ಸಾಧ್ಯತೆಯಿದೆ.