ಕೊಲಂಬೊ: ಶ್ರೀಲಂಕಾದ ಕಡಲ ತೀರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ‘ಎಕ್ಸ್‌ಪ್ರೆಸ್ ಪರ್ಲ್' ಎಂಬ ಹೆಸರಿನ ಸಿಂಗಾಪುರದ ಸರಕು ಸಾಗಣೆ ಹಡಗು ಮುಳುಗುತ್ತಿದೆ. ಅದರಿಂದ ಹೊರಚೆಲ್ಲುವ ಅಪಾರ ಪ್ರಮಾಣದ ತೈಲವು ತೀರ ಪ್ರದೇಶದಲ್ಲಿ ಭಾರಿ ಮಾಲಿನ್ಯ ಸೃಷ್ಟಿ ಮಾಡುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಕಡಲ ತೀರದಲ್ಲಿ ಸೃಷ್ಟಿಯಾಗುವ ಮಾಲಿನ್ಯ ನಿಯಂತ್ರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ಕೊಲಂಬೊದಿಂದ ಮರಾವಿಲಾವರೆಗಿನ ಕಡಲ ತೀರಕ್ಕೆ ಹಡಗಿನಿಂದ ಬರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು ಎಂದು ರಾಷ್ಟ್ರೀಯ ಜಲಸಂಪನ್ಮೂಲ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ನಾರಾ) ತಿಳಿಸಿದೆ.
ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ಈಗಾಗಲೇ ನಿಯಂತ್ರಣ ಮೀರಿ ವ್ಯಾಪಿಸಿದೆ. ಒಂದು ಹಡಗು ಉರಿಯುತ್ತಲೇ ಇದೆ. ಇದರ ಬೆಂಕಿ ನಂದಿಸಲು ಭಾರತವು ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದೆ. ಭಾರತೀಯ ಕರಾವಳಿ ಕಾವಲು ಪಡೆಯ ವೈಭವ್ ಮತ್ತು ವಜ್ರ ಎಂಬ ಹೆಸರಿನ ಎರಡು ಹಡಗುಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಶ್ರೀಲಂಕಾ ನೌಕಾಪಡೆಯ ಹಡಗು ಮತ್ತು ನಾಲ್ಕು ಖಾಸಗಿ ಟಗ್‌ಗಳೂ ಉರಿಯುತ್ತಿರುವ ಹಡಗಿನ ಮೇಲೆ ನೀರು ಸುರಿಸುತ್ತಿವೆ. ಮಿಲಿಟರಿ ಹೆಲಿಕಾಪ್ಟರ್‌ನಿಂದ ಅಗ್ನಿನಂದಕ ರಾಸಾಯನಿಕಗಳನ್ನು ಹಾಕಲಾಗುತ್ತಿದೆ.
ಈ ಹಡಗಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್‌ಗಳು ಮತ್ತು ನೈಟ್ರಿಕ್ ಆ್ಯಸಿಡ್‌ನ 1,486 ಕಂಟೇನರ್‌ಗಳಿವೆ. 186 ಮೀಟರ್ (610 ಅಡಿ) ಉದ್ದದ ಹಡಗು ಬೆಂಕಿಯಿಂದ ತೀರಾ ದುರ್ಬಲಗೊಂಡಿದೆ. ಹಡಗು ಒಡೆದು ತೈಲ ಹೊರಚೆಲ್ಲಲಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.