ಕಾಬೂಲ್: ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅವಘಡದಲ್ಲಿ ಗಾಯಗೊಂಡವರಿಗೆ ಘೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಮೊಹಮ್ಮದ್ ಓಮರ್ ಲಾಲ್ಜಾದ್ ತಿಳಿಸಿದ್ದಾರೆ.
ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಕಚೇರಿ ಮತ್ತು ಪ್ರದೇಶದ ಇತರ ಸರ್ಕಾರಿ ಕಟ್ಟಡಗಳ ಪ್ರವೇಶ ದ್ವಾರದ ಬಳಿ ಕಾರ್ ಬಾಂಬ್ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೃತ್ಯ ಎಸಗಿದ್ದು ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಯುದ್ಧದಿಂದ ಹಾನಿಗೊಳಗಾಗಿರುವ ಅಪಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ತಾಲಿಬಾನ್ ಮತ್ತು ಅಮೆರಿಕ ದೇಶದ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಎರಡೂ ದೇಶದ ರಾಯಭಾರಿಗಳು ಫೆಬ್ರವರಿಯಲ್ಲಿ ಸಹಿ ಹಾಕಿದ್ದರು. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ ದಾಳಿಯನ್ನು ನಡೆಸದಿರಲು ಶುಕ್ರವಾರವಷ್ಟೇ ತಾಲಿಬಾನ್ ಒಪ್ಪಿಕೊಂಡಿತ್ತು.