ಲಂಡನ್: ಹಮಾಸ್ ವಿರುದ್ಧದ ಮಿಲಿಟರಿ ಚಟುವಟಿಕೆಗಳು ಸೂಕ್ತ ಪ್ರಮಾಣದಲ್ಲಿರುವುದನ್ನು ಇಸ್ರೇಲ್ ಖಚಿತಪಡಿಸಿಕೊಳ್ಳಬೇಕು ಎಂದು ಬ್ರಿಟಿಷ್ ಸರ್ಕಾರ ಹೇಳಿದೆ.
ಗಾಝಾದಲ್ಲಿ ಮಾಧ್ಯಮ ಕಚೇರಿಗಳು ಮತ್ತು ಇತರ ನಾಗರಿಕರನ್ನು ಗಿರಿಯಾಗಿಸಿಕೊಂಡು ನಡೆಸಿದ ದಾಳಿ ಹಾಗೂ ನಾಶದಿಂದ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ವಕ್ತಾರ ಮ್ಯಾಕ್ಸ್ ಬ್ಲೇನ್ ಮಾಹಿತಿ ನೀಡಿದ್ದು, ಶನಿವಾರ ನಡೆದ ದಾಳಿಯಲ್ಲಿ ಬ್ರಿಟನ್ ಯುಎಸ್ ಮತ್ತು ಯುಎನ್ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದೆ. ಇಸ್ರೇಲಿ ಸರ್ಕಾರದಿಂದ ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದೆ ಎಂದು ಹೇಳಿದರು. ಇನ್ನು ಶನಿವಾರ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮ ಸಂಸ್ಥೆಗಳ ಕಚೇರಿಗಳನ್ನು ಹೊಂದಿರುವ ಎತ್ತರದ ಕಟ್ಟಡವನ್ನು ನಾಶಮಾಡಲಾಗಿತ್ತು.
ಗಾಝಾದಲ್ಲಿ 23 ಶಾಲೆಗಳು ಮತ್ತು 500 ಮನೆಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಮಾಧ್ಯಮ ಕಚೇರಿಗಳು ನಾಶವಾಗಿವೆ ಎಂಬ ಯು.ಎನ್ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ ಎಂದು ಬ್ಲೇನ್ ಹೇಳಿದ್ದಾರೆ.
ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ಇಸ್ರೇಲ್ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಮತ್ತು ಮಿಲಿಟರಿ ಚಟುವಟಿಕೆಯು ಸೂಕ್ತಪ್ರಮಾಣದಲ್ಲಿರಬೇಕು ಎಂದು ಅವರು ಸೂಚಿಸಿದ್ದಾರೆ.