ಕ್ವೆಟ್ಟಾ (ಪಾಕಿಸ್ತಾನ): ನೈರುತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ನಗರದ ಐಷಾರಾಮಿ ಹೋಟೆಲಿನ ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆರೆನಾ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 53 ಮಂದಿಯಿದ್ದ ಇಂಡೋನೇಷ್ಯಾ ಸಬ್ಮೆರಿನ್ ಬಾಲಿ ಬಳಿ ಕಣ್ಮರೆ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಲೂಚಿಸ್ತಾನ್ ಪ್ರಾಂತೀಯ ಸರ್ಕಾರದ ವಕ್ತಾರ ಲಿಯಾಕತ್ ಶಹವಾನಿ, "ಈ ದಾಳಿಯ ಹಿಂದೆ ಪಾಕಿಸ್ತಾನದ ಶತ್ರುಗಳು ಇದ್ದಾರೆ" ಎಂದು ಹೇಳಿದ್ದಾರೆ.
ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ತಾಲಿಬಾನ್ ಕೂಡ ಅಸ್ತಿತ್ವದಲ್ಲಿದ್ದು, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮುಂತಾದ ಪ್ರತ್ಯೇಕತಾವಾದಿ ಗುಂಪುಗಳಿಂದ ಆಗಾಗ್ಗೆ ದಾಳಿಗಳು ನಡೆಯುತ್ತಿರುತ್ತವೆ.