ಕುಂಡುಜ್ (ಅಫ್ಘಾನಿಸ್ತಾನ): ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಕಟ್ಟಡದಲ್ಲಿ ಬಾಂಬ್ ದಾಳಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಉತ್ತರ ಜಿಲ್ಲೆಯಾದ ಕುಡುಂಜ್ನಲ್ಲಿ ನಡೆದಿದೆ.
ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಉಪಮುಖ್ಯಸ್ಥರ ಕಾರಿಗೇ ಬಾಂಬ್ ಇಟ್ಟಿದ್ದು, ಕಟ್ಟಡದ ಆವರಣಕ್ಕೆ ಕಾರು ಪ್ರವೇಶಿಸುತ್ತಿದ್ದಂತೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಸ್ಪುತ್ನಿಕ್ ಸುದ್ದಿ ಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.
ಬೆಳಗ್ಗೆ 10 ಗಂಟೆಗೆ ಸ್ಫೋಟ ಸಂಭವಿಸಿದ್ದು, ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಉಪಮುಖ್ಯಸ್ಥರ ಕಾರಿನ ಚಾಲಕ ಸೇರಿದಂತೆ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಭಯೋತ್ಪಾದನಾ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 12 ಮಂದಿ ಬಲಿ, 100ಕ್ಕೂ ಹೆಚ್ಚು ಜನರಿಗೆ ಗಾಯ
ಇತ್ತೀಚೆಗೆ ಅಪ್ಘಾನಿಸ್ತಾನದಲ್ಲಿ ಬಾಂಬ್ ದಾಳಿಯ ಪ್ರಕರಣಗಳು ಹಾಗೂ ಹಿಂಸಾಕೃತ್ಯಗಳು ಹೆಚ್ಚಾಗುತ್ತಿವೆ. ಕತಾರ್ನಲ್ಲಿ ಕಾಬೂಲ್ ಹಾಗೂ ತಾಲಿಬಾನ್ ಮಾತುಕತೆಗಳು ಆರಂಭವಾದಾಗಿನಿಂದ ಈ ರೀತಿಯ ಕೃತ್ಯಗಳು ಹೆಚ್ಚಾಗುತ್ತಿವೆ ಎನ್ನಲಾಗ್ತಿದೆ.
ಈ ಹಿಂದಷ್ಟೇ ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಬಲಿಯಾಗಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.