ಬೀಜಿಂಗ್: ಪೀಪಲ್ಸ್ ಲಿಬರೇಷನ್ ಆರ್ಮಿ ಆಗ್ನೇಯ ಚೀನಾ ಸಮುದ್ರದ ಕರಾವಳಿಯಲ್ಲಿ ಹೆಚ್ಚಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿದ್ದು, ಇದರಿಂದಾಗಿ ತೈವಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಎಂಬ ಪತ್ರಿಕೆ ಈ ಕುರಿತಾಗಿ ವರದಿ ಮಾಡಿದ್ದು, ಆಗ್ನೇಯ ಚೀನಾ ಸಮುದ್ರದಲ್ಲಿ ಹಳೆಯ ಡಿಎಫ್- 11ಎಸ್ ಹಾಗೂ ಡಿಎಫ್15ಎಸ್ ಕ್ಷಿಪಣಿಗಳ ಜಾಗದಲ್ಲಿ ನವೀಕರಿಸಿದ ಹೈಪರ್ ಸಾನಿಕ್ ಕ್ಷಿಪಣಿಗಳಾದ ಡಿಎಫ್-17 ಅನ್ನು ತಂದಿಟ್ಟಿದೆ.
ಚೀನಾದ ಆಗ್ನೇಯ ಭಾಗದಲ್ಲಿ ದಶಕಗಳಿಂದ ಡಿಎಫ್- 11ಎಸ್ ಹಾಗೂ ಡಿಎಫ್-15ಎಸ್ ಮಿಸೈಲ್ಗಳನ್ನು ಇಡಲಾಗಿತ್ತು. ಈಗ ಅವುಗಳನ್ನು ಹಂತಹಂತವಾಗಿ ಬದಲಾವಣೆ ಮಾಡಲಾಗುತ್ತಿದೆ ಎಂದು ಆ ಪತ್ರಿಕೆ ವರದಿ ಮಾಡಿದೆ. ಹೊಸ ಮಿಸೈಲ್ಗಳ ದೂರದ ಗುರಿ ತಲುಪಲಿದ್ದು, ನಿಖರವಾಗಿ ದಾಳಿ ಮಾಡಬಲ್ಲವು ಎಂದು ತಿಳಿಸಿದೆ.
ತೈವಾನ್, ಚೀನಾ ಸರ್ಕಾರದಿಂದ ನಿಯಂತ್ರಣಕ್ಕೆ ಒಳಪಡದೇ ಇದ್ದರೂ ಅಲ್ಲಿನ ಚೀನಾ ಪ್ರಾಧಿಕಾರಗಳು ತೈವಾನ್ ಅನ್ನು ಚೀನಾದ ಪ್ರದೇಶದ ಭಾಗವೆಂದೇ ಪರಿಗಣಿಸುತ್ತಿವೆ.
ಕೆನಡಾ ಮೂಲದ 'ಕನ್ವಾ ಡಿಫೆನ್ಸ್ ರಿವ್ಯೂ' ನೀಡಿರುವ ಮಾಹಿತಿಯಂತೆ ಮರೈನ್ ಕಾರ್ಪ್ಸ್ ಹಾಗೂ ರಾಕೆಟ್ ಫೋರ್ಸ್ಗಳು ಫುಜಿಯಾನ್ ಹಾಗೂ ಗುವಾಂಗ್ಡೊಂಗ್ನಲ್ಲಿ ವಿಸ್ತರಣೆಗೊಂಡಿವೆ. ಎಲ್ಲಾ ರಾಕೆಟ್ ಫೋರ್ಸ್ಗಳು ಈಗ ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದು ವರದಿ ಹೇಳಿದೆ.
ಪೂರ್ವ ಹಾಗೂ ಆಗ್ನೇಯ ಭಾಗಗಳಲ್ಲಿ ನಿಯೋಜಿಸಿರುವ ಮಿಸೈಲ್ಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ದುಪ್ಪಟ್ಟಾಗಿದ್ದು, ಇದು ಪೀಪಲ್ಸ್ ಲಿಬರೇಷನ್ ಆರ್ಮಿ ತೈವಾನ್ ವಿರುದ್ಧ ಯುದ್ಧಕ್ಕೆ ಸಜ್ಜಾಗಿರುವುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮಂಗಳವಾರ ಗುವಾಂಗ್ಡೊಂಗ್ನ ದಕ್ಷಿಣದಲ್ಲಿರುವ ಮಿಲಿಟರಿ ನೆಲೆಗೆ ಭೇಟಿ ನೀಡಿದ್ದು, ಅಲ್ಲಿನ ಸೇನಾ ಸಿಬ್ಬಂದಿಗೆ ಯುದ್ಧಕ್ಕೆ ಮಾನಸಿಕವಾಗಿ ಸಜ್ಜಾಗಿರುವಂತೆ ಸೂಚಿಸಿದ್ದರು ಎಂದು ನ್ಯೂಸ್ ಏಜೆನ್ಸಿ ಕ್ಸಿನುವಾ ವರದಿ ಮಾಡಿತ್ತು.