ಕ್ವೆಟ್ಟಾ (ಪಾಕಿಸ್ತಾನ): ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ದೂರದ ಪ್ರದೇಶಗಳಲ್ಲಿ ಎರಡು ಭದ್ರತಾ ಶಿಬಿರಗಳನ್ನು ಗುರಿಯಾಗಿಸಿ ಶಸ್ತ್ರಸಜ್ಜಿತ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ನಡೆಸಿ ಕನಿಷ್ಠ ನಾಲ್ವರು ದಾಳಿಕೋರರನ್ನು ಪಾಕ್ ಸೇನೆ ಹತ್ಯೆ ಮಾಡಿದೆ. ಓರ್ವ ದಾಳಿಕೋರನನ್ನು ಹೊಡೆದು ಕೊಲ್ಲಲಾಗಿದೆ ಎಂದು ಅಲ್ಲಿನ ಸೇನೆ ತಿಳಿಸಿದೆ.
ಹೊಸದಾಗಿ ರೂಪುಗೊಂಡಿರುವ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ನ್ಯಾಷನಲಿಸ್ಟ್ ಆರ್ಮಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಎರಡು ಪ್ರತ್ಯೇಕ ದಾಳಿಗಳ ಪೈಕಿ ಮೊದಲನೆಯದು ಬಲೂಚಿಸ್ತಾನ್ ಪ್ರಾಂತ್ಯದ ಬಂಜ್‌ಗುರ್‌ನಲ್ಲಿ ನಡೆದಿದೆ.
ದಾಳಿಕೋರರು ಬಲೂಚಿಸ್ತಾನದ ನೌಶ್ಕಿಯಲ್ಲಿರುವ ಭದ್ರತಾ ಶಿಬಿರಕ್ಕೆ ನುಸುಳಲು ಪ್ರಯತ್ನಿಸಿದ್ದಾರೆ. ಆದರೆ, ಭದ್ರತಾ ಪಡೆಗಳು ಪ್ರಯತ್ನವನ್ನು ವಿಫಲಗೊಳಿಸಿ ನಾಲ್ವರು ದಾಳಿಕೋರರನ್ನು ಕೊಂದಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಕೂಡ ಗಾಯಗೊಂಡಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಸೇನೆ ಮಾಹಿತಿ ನೀಡಿದೆ.
ಬಲೂಚಿಸ್ತಾನ್ ನ್ಯಾಶನಲಿಸ್ಟ್ ಆರ್ಮಿಯನ್ನು ಕಳೆದ ತಿಂಗಳ ಹಿಂದಷ್ಟೇ ಸ್ಥಾಪಿಸಲಾಗಿತ್ತು. ಎರಡು ಸಣ್ಣ ಪ್ರತ್ಯೇಕತಾವಾದಿ ಗುಂಪುಗಳು ಬಲೂಚಿಸ್ತಾನ್ ರಿಪಬ್ಲಿಕನ್ ಆರ್ಮಿ ಮತ್ತು ಯುನೈಟೆಡ್ ಬಲೂಚ್ ಆರ್ಮಿ ವಿಲೀನಗೊಂಡು ದಾಳಿಗಳನ್ನು ಮುಂದುವರಿಸಲು ಪ್ರತಿಜ್ಞೆ ಮಾಡಿವೆ.
ಬಲೂಚಿಸ್ತಾನದ ಕೆಚ್ ಪಟ್ಟಣದ ಭದ್ರತಾ ಪೋಸ್ಟ್‌ನ ಮೇಲೆ ಉಗ್ರರು ದಾಳಿ ನಡೆಸಿ 10 ಸೈನಿಕರನ್ನು ಕೊಂದ ಒಂದು ವಾರದ ನಂತರ ಮತ್ತೆ ಪಾಕ್ ಸೈನಿಕರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಬಲೂಚಿಸ್ತಾನ್ ಪ್ರಾಂತ್ಯದ ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯಕ್ಕಾಗಿ ಕೆಲ ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ