ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ(ಎಲ್‌ಎಸಿ)ಯಲ್ಲಿ ಉಂಟಾಗಿರುವ ಗಡಿ ಉದ್ವಿಗ್ನಸ್ಥಿತಿ ತಹಬದಿಗೆ ತರಲು ಸೇನಾ ಕಮಾಂಡೆಂಟ್ ಮಟ್ಟದ ಸಭೆಗಳು ಹಲವು ತಿಂಗಳುಗಳಿಂದ ನಡೆಯುತ್ತಲೇ ಇವೆ. ಆದರೆ, ಈ ಯಾವುದೇ ಅಧಿಕಾರಿ ಮಟ್ಟದ ಸಭೆಯಲ್ಲಿ ಸಫಲವಾಗುತ್ತಿಲ್ಲ. ಮಾಲ್ಡೊದಲ್ಲಿ ನಡೆದ 14 ಗಂಟೆಗಳ ನಿರಂತರ ಸಭೆಯಲ್ಲೂ ಯಾವುದೇ ಸಕರಾತ್ಮಾಕ ಫಲಿತಾಂಶ ಇಲ್ಲದೇ ಮುಕ್ತಾಯವಾಗಿದೆ.
ಕೆಲ ಮೂಲಗಳ ಪ್ರಕಾರ ಪೂರ್ವ ಲಡಾಖ್‌ನ ಸಮೀಪದಲ್ಲಿ ಹಾಕಿರುವ ಚೀನಾ ಸೇನೆ ಟೆಂಟ್‌ಗಳನ್ನು ತೆರವು ಮಾಡಿಲ್ಲ ಎನ್ನಲಾಗಿದೆ. ಪ್ಯಾಂಗಾಂಗ್ ಲೇಕ್ ಬಳಿಯ ಶಿಬಿರಗಳನ್ನು ತೆರವುಗೊಳಿಸಲು ಕಮ್ಯೂನಿಸ್ಟ್ ಸೇನೆ ನಿರಾಕರಿಸಿದ್ದು, ಯಾವುದೇ ಮಟ್ಟದ ಸಭೆಯ ನಿರ್ಧಾರಗಳನ್ನು ಪಾಲಿಸಲು ನಿರ್ಲಕ್ಷಿಸಿದೆ ಎಂದು ಹೇಳಲಾಗುತ್ತಿದೆ.
ಇದೀಗ ಹೊಸದಾಗಿ ಅಕ್ರಮಿಸಿಕೊಂಡಿರುವ ಪ್ರದೇಶದಿಂದ ಭಾರತವೇ ಹಿಂದೆ ಸರಿಯಬೇಕು ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಒತ್ತಾಯಿಸಿದೆ. ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಈವರೆಗೆ ಯಾವುದೇ ರೀತಿಯ ಸಭೆ ಯಶಸ್ವಿ ಕಾಣದಿದ್ದರು ಎರಡೂ ಕಡೆಯವರು ಮತ್ತೆ 15 ದಿನಗಳ ಬಳಿಕ ಸಭೆ ಸೇರಲು ನಿರ್ಧರಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಮಟ್ಟದ ಸಭೆ ವಿಫಲವಾಗುತ್ತಿರುವ ಕಾರಣ ಇದೀಗ ಎರಡೂ ದೇಶಗಳ ಅಗ್ರ ನಾಯಕರ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬಲಿಷ್ಠ ನಾಯಕರಾಗಿದ್ದು, ಸಮಸ್ಯೆ ಬಗೆ ಹರಿಸಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಎನ್‌ಒಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿಯಲಿದೆ.