ಕಾಬೂಲ್ (ಅಫ್ಘಾನಿಸ್ತಾನ) : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಾಗಿನಿಂದಲೂ ದೇಶದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಭಯೋತ್ಪಾದಕರ ಆಳ್ವಿಕೆಗೆ ಹೆದರಿ ದೇಶ ತೊರೆಯಲು ಮುಂದಾಗಿದ್ದಾರೆ.
ಇದಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಕಿಕ್ಕಿರಿದಿದ್ದಾರೆ. ಈ ವೇಳೆ ಕಾಲ್ತುಳಿತ, ಗಲಾಟೆಗಳಂತಹ ಅನೇಕ ದುರ್ಘಟನೆಗಳಿಗೆ ಕಾಬೂಲ್ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಮತ್ತೊಂದು ಮನಕಲಕುವ ದೃಶ್ಯ ಹೊರ ಬಿದ್ದಿದೆ. ಕಾಬೂಲ್ ವಿಮಾನ ನಿಲ್ದಾಣಕ್ಕೆ ತಾಲಿಬಾನ್ ಸುತ್ತುವರೆದಿದ್ದು, ಜನರು ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ನೀಡುತ್ತಿದೆ.
ಆದರೆ, ಇತ್ತ ಉಗ್ರ ಆಡಳಿತದ ಭೀತಿಯಲ್ಲಿರುವ ಜನರು ಕಾಬೂಲ್ ವಿಮಾನ ನಿಲ್ದಾಣದ ಎದುರು ಚರಂಡಿ ನೀರಿನಲ್ಲಿಯೇ ಗಂಟೆಗಟ್ಟಲೇ ನಿಂತು ತಮ್ಮನ್ನು ವಿಮಾನ ನಿಲ್ದಾಣದ ಒಳಗೆ ಹೋಗಲು ಬಿಡುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ.
ಸಾವಿರಾರು ಅಫ್ಘಾನ್ರು ಸಹಾಯಕ್ಕಾಗಿ ಅಳುತ್ತಾ ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಮನವಿ ಮಾಡುತ್ತಿದ್ದಾರೆ. ಮೊಣಕಾಲಿನವರೆಗೆ ಚರಂಡಿ ನೀರಿದ್ದರೂ ಲೆಕ್ಕಿಸದೇ ಗಂಟೆಗಟ್ಟಲೇ ಕಾಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಶಸ್ತ್ರಾಸ್ತ್ರ ತಾಲಿಬಾನ್ ಕೈಸೇರಿದ ಬಗ್ಗೆ ರಷ್ಯಾ ಕಳವಳ : ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಬಗ್ಗೆ ರಷ್ಯಾದ ರಕ್ಷಣಾ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ರಷ್ಯಾದ ರಕ್ಷಣಾ ಮಂತ್ರಿ ಸೆರ್ಗೆಯ್ ಶೋಯಿಗು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಾಲಿಬಾನ್ ನೂರಾರು ಯುದ್ಧ ವಾಹನಗಳು ಮತ್ತು ಹಲವಾರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಓದಿ: ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗಿಸಿದರೆ ಸೇನೆ ಬಳಕೆ: ಬೈಡನ್ ಎಚ್ಚರಿಕೆ
ತಾಲಿಬಾನ್‌ಗಳು 100ಕ್ಕಿಂತ ಹೆಚ್ಚು ಮಾನವ-ಪೋರ್ಟಬಲ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಪಡೆಯುವ ಬಗ್ಗೆ ಸೆರ್ಗೆಯ್ ಶೋಯಿಗು ಆತಂಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ನಿರಾಶ್ರಿತರ ಸಮಸ್ಯೆ ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು ಶೋಯಿಗು ಹೇಳಿದರು.
ತಾಲಿಬಾನ್ ದೇಶದ ಎಲ್ಲ ಗುಂಪುಗಳನ್ನು ಒಳಗೊಂಡ ಒಂದು ಅಂತರ್ಗತ ಸರ್ಕಾರವನ್ನು ರಚಿಸಲು ಮುಂದಾಗುತ್ತದೆ ಎಂದು ರಷ್ಯಾದ ರಕ್ಷಣಾ ಮುಖ್ಯಸ್ಥರು ಭರವಸೆ ವ್ಯಕ್ತಪಡಿಸಿದರು.
ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿವೆ ಎಂದ ಬೈಡನ್ : ಜಿ-7, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಮುಖಂಡರುಗಳ ಜೊತೆಗೆ ಇಂದು ಯುಎಸ್ ಅಧ್ಯಕ್ಷ ಜೋ ಬೈಡನ್ ವರ್ಚುಯಲ್ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಬೈಡನ್, ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿವೆ. ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜಿ-7 ಎಂಬುದು ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್ ಸೇರಿ ಅಂತರ್ ಸರ್ಕಾರಿ ರಾಜಕೀಯ ವೇದಿಕೆ. ತಾಲಿಬಾನ್ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ನಿಲ್ಲಲು ಜಿ-7, ಯುರೋಪಿಯನ್ ಯೂನಿಯನ್, ನ್ಯಾಟೋ ಮತ್ತು ವಿಶ್ವಸಂಸ್ಥೆಯ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿ-7 ದೇಶಗಳು ತಮ್ಮಲ್ಲಿ ಯಾರೂ ತಾಲಿಬಾನ್ ಮಾತನ್ನು ತೆಗೆದುಕೊಳ್ಳುವುದಿಲ್ಲ. ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲ ನೆಲೆಯಾಗದಂತೆ ತಡೆಯುವುದು ಮತ್ತು ಅಫ್ಘಾನಿಸ್ತಾದಲ್ಲಿ ಭವಿಷ್ಯದ ಸರ್ಕಾರದ ನ್ಯಾಯ ಸಮ್ಮತತೆಯು ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಎತ್ತಿಹಿಡಿಯಲು ಈಗ (ತಾಲಿಬಾನ್) ತೆಗೆದುಕೊಳ್ಳುವ ವಿಧಾನವನ್ನು ಅವಲಂಬಿಸಿದೆ ಎಂಬುದನ್ನು ನಾವು ಒಪ್ಪಿದ್ದೇವೆ. ತಾಲಿಬಾನ್ ನಡವಳಿಕೆಗೆ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ನಾವು ನಿಕಟ ಸಹಕಾರದಿಂದ ಇರುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಅನಿಯಮಿತ ಮಾನವೀಯ ಪ್ರವೇಶದೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಪ್ರಸ್ತಾವನೆಯನ್ನು ಬೆಂಬಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಓದಿ: ಆಫ್ಘನ್ ಸಚಿವನಾಗಿದ್ದ ಸೈಯದ್ ಅಹ್ಮದ್ ಶಾ ಇದೀಗ ಪಿಜ್ಜಾ ಡೆಲಿವರಿ ಬಾಯ್!