ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದ ಸ್ಥಿತಿ ತೀರಾ ಶೋಚನೀಯವಾಗಿದೆ. ಎಲ್ಲ ಪ್ರಾಂತ್ಯಗಳಲ್ಲಿ ಬಡತನ ತಾಂಡವವಾಡುತ್ತಿದೆ. ಶಾಲೆಯ ಮುಖ ನೋಡಬೇಕಿದ್ದ ಮಕ್ಕಳು ಬಡತನ ನೀಗಿಸಲು ಅತ್ಯಂತ ಕಠಿಣ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಅದರಲ್ಲೂ ಘೋರ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿನ ಪ್ರದೇಶಗಳಲ್ಲಿನ ಮಕ್ಕಳು ತಮ್ಮ ತಮ್ಮ ಕುಟುಂಬಗಳನ್ನು ಪೋಷಿಸುತ್ತಿವೆ. ಒತ್ತಾಯಪೂರ್ವಕವಾಗಿ ಮಕ್ಕಳನ್ನು ದುಡಿಮೆಗೆ ಕಳುಹಿ ಸಲಾಗುತ್ತಿದೆ ಎಂದು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.
ಚಿಕ್ಕ ಚಿಕ್ಕ ಮಕ್ಕಳು ಬಾಲ್ಯದ ಸವಿಯನ್ನು ಸವಿಯುವುದು ಬಿಟ್ಟು, ಕುಟುಂಬದ ಹೊಟ್ಟೆ ತುಂಬಿಸಲು ಮೈಮುರಿದು ದುಡಿಯಬೇಕಿದೆ. ಘೋರ್ ಪ್ರಾಂತ್ಯದಲ್ಲಿ ಹುಡುಕುತ್ತಾ ಹೋದರೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ.
ಮೊಹಮದ್ ಹಸನ್ ಎಂಬ ಬಾಲಕ ಹರಿರೋಡ್ ನದಿಯ ದಡದಲ್ಲಿ ತನ್ನ ಅಣ್ಣನೊಂದಿಗೆ ಕಾರು ತೊಳೆಯುವ ಕೆಲಸ ಮಾಡುತ್ತಾನೆ. ಈ ಕೆಲಸದಿಂದ ಅವರಿಗೆ ಸಿಗೋದು 100 ರಿಂದ 200 ಎಎಫ್ಎಸ್ (ಆಫ್ಘನ್ ಕರೆನ್ಸಿ) ಭಾರತ ರೂಪಾಯಿ ಬೆಲೆಯಲ್ಲಿ 70 ರಿಂದ 140 ರೂಪಾಯಿ. ಇದೇ ಹಣದಿಂದ ಅವರು ಕುಟುಂಬದ ಪೋಷಣೆ ಮಾಡುತ್ತಿದ್ದಾರೆ.
ಕಾರು ತೊಳೆಯುವುದು ತುಂಬಾ ಕಷ್ಟವಾದ ಕೆಲಸವೇ?
ಕಾರು ತೊಳೆಯುವುದು ತುಂಬಾ ಸುಲಭವಾದ ಕಷ್ಟವಾದ ಕೆಲಸ ಅಲ್ಲ ಎಂಬ ನಿಮ್ಮ ಅಭಿಪ್ರಾಯವಿರಬಹುದು. ಹಾಗಂತ ನಿಮ್ಮ ಅಭಿಪ್ರಾಯವಿದ್ದರೆ, ಅಲ್ಲಿನ ಚಳಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಬೆಂಗಳೂರಿನಲ್ಲಿ ಶನಿವಾರ 9 ಗಂಟೆಗೆ 22 ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿದ್ದರೆ, ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಮೈನಸ್ 3ರಿಂದ 5 ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿದೆ. ಘೋರ್ ಪ್ರಾಂತ್ಯದಲ್ಲಿ ತಾಪಮಾನ ಮೈನಸ್ 7 ಡಿಗ್ರಿ ಸೆಂಟಿಗ್ರೇಡ್ ಇದೆ. ಅಂದರೆ ಅಲ್ಲಿನ ಚಳಿಯನ್ನು ನೀವು ಊಹೆ ಮಾಡಿಕೊಳ್ಳಬಹುದು. ದಿನವಿಡಿ ಅಲ್ಲಿ ಚಳಿ ಅಧಿಕವಾಗಿರುತ್ತದೆ.
'ಮನೆಯಲ್ಲಿ ಊಟವಿಲ್ಲ'
ಈ ಕುರಿತು ಬಾಲಕ ಮೊಹಮದ್ ಹಸನ್ನನ್ನು ಕೇಳಿದರೆ, ಆತ ತಣ್ಣೀರಿನಲ್ಲಿ ಕಾರು ತೊಳೆಯುವುದು ತುಂಬಾ ಕಷ್ಟ. ಅದು ನಮ್ಮ ಆರೋಗ್ಯಕ್ಕೂ ಅಪಾಯಕಾರಿ, ನಮಗೆ ಬೇರೆ ದಾರಿಯಿಲ್ಲ. ನಾವು ಶಾಲೆಗೆ ಹೋದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಹೋಗದಿದ್ದರೆ, ಮನೆಯಲ್ಲಿ ಊಟ ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ನಿಸಾರ್ ಅಹ್ಮದ್ ಎಂಬ ಇನ್ನೊಬ್ಬ ಬಾಲಕ ಕೇವಲ 70 ರೂಪಾಯಿಗಾಗಿ ದಿನವಿಡೀ ಕೆಲಸ ಮಾಡುತ್ತಾನೆ. ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ಶಾಲೆಗೆ ಹೋಗಲಿಲ್ಲ. ನಾಲ್ಕು ವರ್ಷದಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾನೆ. ತಾಲಿಬಾನ್ ಆಡಳಿತಕ್ಕೂ ಮುಂಚೆಯೇ ಅವನ ಕುಟುಂಬದಲ್ಲಿ ಕಡುಬಡತವಿತ್ತು ಎಂದು ತಿಳಿದು ಬಂದಿದೆ. ತಾಲಿಬಾನ್ ಆಡಳಿತ ಬಂದ ನಂತರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಬಾಲಕಿಯರಿಂದ ಭಿಕ್ಷಾಟನೆ: ಇವರಷ್ಟೇ ಮಾತ್ರವಲ್ಲ. ಘೋರ್ ಪ್ರಾಂತ್ಯದಲ್ಲಿ ಇನ್ನೂ ಅನೇಕ ಮಕ್ಕಳು ಕಷ್ಟಪಟ್ಟು ದುಡಿಯುತ್ತಾರೆ. ಇದಲ್ಲದೇ, ಫಿರೋಜ್‌ಕೋಹ್ ನಗರದಲ್ಲಿ ಕಠಿಣ ದುಡಿಮೆಯಲ್ಲಿ ತೊಡಗಿರುವ ಹದಿಹರೆಯದವರ ಸಂಖ್ಯೆ ಹೆಚ್ಚಾಗಾಗಿದೆ. ಕೆಲವು ಬಾಲಕಿಯರು ನಗರಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಪಜ್ವಾಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.
'ಸಹೋದರ, ಸಹೋದರಿಯರಿಗಾಗಿ ಕೆಲಸ'
ಕೇವಲ 15 ವರ್ಷದ ಅಬ್ದುಲ್ ರವೂಫ್ ಲೋಹದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲಸ ಮಾಡದಿದ್ದರೆ, ನನ್ನ ಸಹೋದರರು ಮತ್ತು ಸಹೋದರಿಯರು ಹಸಿವಿನಿಂದ ಸಾಯುತ್ತಾರೆ ಎಂದು ಭಾವುಕನಾಗಿದ್ದಾನೆ. 12 ವರ್ಷದ ರೋಜುದ್ದೀನ್ ಕೂಡಾ ಲೋಹದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅವನಿಗೆ ಬರುವ ಅಲ್ಪ ಹಣದಲ್ಲಿ ಬ್ರೆಡ್, ಚಹಾ ಮತ್ತು ಇನ್ನಿತರ ವಸ್ತುಗಳನ್ನು ಮಾತ್ರ ಕೊಳ್ಳಲು ಸಾಧ್ಯವಾಗುತ್ತದೆಯಂತೆ.
ಅಂತಾರಾಷ್ಟ್ರೀಯ ಸಂಸ್ಥೆಗಳ ಕಳವಳ: ಘೋರ್ ಪ್ರಾಂತ್ಯದ ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಯ ವಿಭಾಗದ ಮುಖ್ಯಸ್ಥ ಮುಲ್ಲಾ ನಸ್ರುಲ್ಲಾ ಅನ್ಸಾರಿ ಮಕ್ಕಳ ದುಡಿಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಎನ್‌ಜಿಒಗಳೊಂದಿಗೆ ಸಭೆಗಳನ್ನು ನಡೆಸಿದ್ದೇವೆ ಮತ್ತು ಕಠಿಣ ದುಡಿಮೆಯಲ್ಲಿ ತೊಡಗಿರುವ ಮಕ್ಕಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಕುರಿತು ರಾಜ್ಯಪಾಲರನ್ನೂ ಒತ್ತಾಯಿಸಿದ್ದೇವೆ ಎಂದಿದ್ದಾರೆ. ಯುಕೆ ಮೂಲದ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ 'ಸೇವ್ ದಿ ಚಿಲ್ಡ್ರನ್' ಆಫ್ಘನ್ ಮಕ್ಕಳ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: China Covid: ಚೀನಾದಲ್ಲಿ ಲಕ್ಷಾಂತರ ಮಂದಿಯನ್ನು ಕ್ವಾರಂಟೈನ್ಗೆ ಹೀಗೆ ಮಾಡ್ತಾರೆ..!