ಕಾಬೂಲ್, ಅಫ್ಘಾನಿಸ್ತಾನ : ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಆಡಳಿತ ನಡೆಸಲು ಆರಂಭಿಸಿವೆ. ತಾಲಿಬಾನ್ ವಿರುದ್ಧ ಅಲ್ಲಿನ ಜನಾಕ್ರೋಶವೂ ಕೂಡಾ ಹೆಚ್ಚಾಗುತ್ತಿದೆ. ಜನರನ್ನು ಸದಾ ತಮ್ಮ ಹಿಡಿತದಲ್ಲಿಯೇ ಇಟ್ಟುಕೊಳ್ಳಬೇಕು ಎಂಬ ತಾಲಿಬಾನ್ ಅಧಿಕಾರಿಗಳೂ ಈಗ ಜೀವಭಯ ಎದುರಿಸುತ್ತಿದ್ದಾರೆ.
ಪೂರ್ವ ಕುನಾರ್ ಪ್ರಾಂತ್ಯದಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಮತ್ತು ಅವರ ಮಗ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ವೈಯುಕ್ತಿಕ ದ್ವೇಷದಿಂದಲೇ ಈ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ವೈಯಕ್ತಿಕ ವಿಚಾರವಾಗಿ ಕಮಾಂಡರ್ ಹತ್ಯೆ ನಡೆಯುವುದು ಅಫ್ಘಾನಿಸ್ತಾನದಲ್ಲಿ ಅಪರೂಪದ ವಿಚಾರವಾಗಿದೆ.
ಇತ್ತೀಚೆಗೆ ತಾಲಿಬಾನ್ ಪಡೆಗಳೂ ನಾಗರಿಕರ ಮೇಲೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿರುವುದು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಹೆರಾತ್ ಪ್ರಾಂತ್ಯದ ಕಜೇಮಿ ಪ್ರದೇಶದಲ್ಲಿ ತಾಲಿಬಾನಿಗಳು ಗುಂಡುಹಾರಿಸಿ, ಒಬ್ಬ ಕಾರು ಚಾಲಕ ಮತ್ತು ವೈದ್ಯನೊಬ್ಬನನ್ನು ಕೊಂದಿದ್ದರು.
ಹಿಂದಿನ ವಾರವಷ್ಟೇ ಕುಟುಂಬದೊಂದಿಗೆ ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುತ್ತಿದ್ದ ಯುವತಿಯನ್ನು ಪಶ್ಚಿಮ ಕಾಬೂಲ್ನ ದಶ್ತ್- ಇ- ಬಾರ್ಕಿಯಲ್ಲಿ ತಾಲಿಬಾನ್ ಪಡೆಗಳು ಕೊಂದಿದ್ದವು ಎಂದು ವರದಿಗಳಲ್ಲಿ ಉಲ್ಲೇಖವಾಗಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುವುದಿಲ್ಲ: ಜೋ ಬೈಡನ್