ಢಾಕಾ: ಮಸೀದಿಯಲ್ಲಿದ್ದ ಆರು ಹವಾ ನಿಯಂತ್ರಣ ಯಂತ್ರಗಳು ಸ್ಫೋಟಗೊಂಡ ಪರಿಣಾಮ ಪ್ರಾರ್ಥನೆ ಸಲ್ಲಿಸುತ್ತಿದ್ದ 12 ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದೆ.
ಢಾಕಾದ ನಾರಾಯಣಗಂಜ್ ನದಿಯ ಬಂದರು ಬಳಿ ಇರುವ ಮಸೀದಿಯಲ್ಲಿ ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಘಟನೆ ನಡೆದಿದ್ದು, ಓರ್ವ ಬಾಲಕ ಸೇರಿದಂತೆ 12 ಜನರು ಬಲಿಯಾಗಿದ್ದಾರೆ. ಘಟನೆಯಲ್ಲಿ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಶೇ. 90ರಷ್ಟು ದೇಹದ ಭಾಗ ಸುಟ್ಟಿದ್ದು, ಗಾಯಾಳುಗಳ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯ ಡಾ. ಸಂತಾ ಲಾಲ್ ಸೇನ್ ಮಾಹಿತಿ ನೀಡಿದ್ದಾರೆ.
ಪೈಪ್ ಲೈನ್‌ನಿಂದ ಅನಿಲ ಸೋರಿಕೆಯಾಗಿ ಎಸಿ ಸ್ಫೋಟವಾಗಿರಬಹುದೆಂದು ಅಗ್ನಿಶಾಮಕ ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಪ್ರತ್ಯೇಕ ತನಿಖೆ ಆರಂಭಿಸಿವೆ.