ಇಸ್ಲಮಾಬಾದ್(ಪಾಕಿಸ್ತಾನ): 2019ರಲ್ಲಿ ಸರ್ಚ್ ಎಂಜಿನ್ ದೈತ್ಯ ಗೂಗಲ್ನಲ್ಲಿ ಪಾಕಿಸ್ತಾನದಿಂದ ಅತಿ ಹೆಚ್ಚು ಹುಡುಕಾಟವಾದ ವ್ಯಕ್ತಿಗಳಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹಾಗೂ ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮಾಹಿತಿಯನ್ನು ಗೂಗಲ್ ಬಿಡುಗಡೆಗೊಳಿಸಿದ್ದು, ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ ಇದೇ ವರ್ಷದ ಫೆಬ್ರವರಿಯಲ್ಲಿ ಭಾರತದ ಗಡಿಯೊಳಗೆ ನುಗ್ಗಿದ ಪಾಕ್ ವಿಮಾನವನ್ನು ಹೊಡೆದುರುಳಿಸುವ ವೇಳೆ ಆಕಸ್ಮಿಕವಾಗಿ ಪಾಕಿಗಳಿಂದ ಬಂಧಿತರಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್, ಈ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದ ಟಿವಿ ಶೋ ಬಿಗ್ಬಾಸ್ 13ನೇ ಸೀಸನ್ ಪಾಕ್ನಲ್ಲಿ ಎರಡನೇ ಹೆಚ್ಚು ಟ್ರೆಂಡಿಂಗ್ ಸರ್ಚ್ ಆಗಿದೆ. ಬಾಲಿವುಡ್ ಸಿನಿಮಾಗಳಾದ ಕಬೀರ್ ಸಿಂಗ್ ಹಾಗೂ ಗಲ್ಲಿ ಬಾಯ್ ಹೆಚ್ಚು ಹುಡುಕಾಟಗೊಂಡ ಸಿನಿಮಾಗಳಲ್ಲಿ ಕ್ರಮವಾಗಿ 5 ಮತ್ತು 10ನೇ ಸ್ಥಾನದಲ್ಲಿವೆ.