ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪ್ರಯಾಣಿಕರ ವಾಹನವೊಂದು ಗಿರಿ ಕಂದಕಕ್ಕೆ ಉರುಳಿ ಕನಿಷ್ಠ 8 ಜನರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅಪಘಾತ ಕಾಕಾ ಸಾಹಿಬ್ ರಸ್ತೆ ನೌಶೇರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನೌಶೇರಾ ನೂರ್ ವಾಲಿ ಖಾನ್ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಘಟನೆಯ ನಂತರ ಪೊಲೀಸರು ರಕ್ಷಣಾ ತಂಡಗಳ ಜೊತೆಗೆ ಸ್ಥಳೀಯರು ಕೈಜೋಡಿಸಿದ್ದು, ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರ ಪೈಕಿ ಕನಿಷ್ಠ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕ್ಲಿಷ್ಟಕರವಾದ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ಗಿರಿ ಕಂದಕಕ್ಕೆ ಉರುಳಿ ಬಿದ್ದಿದೆ ಎಂದ ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.