ಫೈಸಲಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಾಲ್ವರು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಕೆಲ ದುಷ್ಕರ್ಮಿಗಳು, ತದನಂತರ ಅವರ ಬಟ್ಟೆ ಬಿಚ್ಚಿಸಿ ಚಿತ್ರೀಕರಣ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಬಿತ್ತರಿಸಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಫೈಸಲಾಬಾದ್‌ನ ಬಾವಾ ಚೌಕ್ ಮಾರ್ಕೆಟ್‌ನಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್ನ ಮಾಲೀಕ ಸದ್ದಾಂ, ಆತನ ಸಹದ್ಯೋಗಿಗಳಾದ ಫೈಸಲ್, ಜಹೀರ್ ಅನ್ವರ್ ಹಾಗೂ ಫಕೀರ್ ಹುಸೇನ್ ಎಂಬ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಎಫ್ಐಆರ್ ಪ್ರಕಾರ, ಚಿಂದಿ ಆಯುವ ನಾಲ್ವರು ಮಹಿಳೆಯರು ಇಂದು ಬೆಳಗ್ಗೆ ಬಾವಾ ಚೌಕ್ ಮಾರುಕಟ್ಟೆಗೆ ತೆರಳಿದ್ದಾರೆ. ಈ ವೇಳೆ, ಬಾಯಾರಿಕೆ ಆಗಿರುವ ಕಾರಣ ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್ನೊಳಗೆ ಹೋಗಿದ್ದು, ಕುಡಿಯಲು ನೀರು ಕೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಮಾಲೀಕ ಸದ್ದಾಂ, ಮಾಲು ಕದಿಯುವ ಉದ್ದೇಶದಿಂದ ಅಂಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದು, ಬೆತ್ತಲೆ ಮಾಡಿ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ.
ಆತನೊಂದಿಗೆ ಇದ್ದ ಇತರರು ಮಹಿಳೆಯರನ್ನ ವಿವಸ್ತ್ರಗೊಳಿಸಿ, ಮಾರುಕಟ್ಟೆಯಲ್ಲಿ ಎಳೆದಾಡಿ ಚಿತ್ರಹಿಂಸೆ ನೀಡಿದ್ದಾರೆಂದು ಸಂತ್ರಸ್ತೆಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ.