ಕರಾಚಿ(ಪಾಕಿಸ್ತಾನ): ಬಲೂಚಿಸ್ತಾನ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಗುರುವಾರ ನಡೆದ ಪ್ರಬಲ ಭೂಕಂಪದ ಕಾರಣಕ್ಕೆ ಕಲ್ಲಿದ್ದಲು ಗಣಿ ಮತ್ತು ಮನೆಗಳು ಕುಸಿದು ಸುಮಾರು 22 ಮಂದಿ ಸಾವನ್ನಪ್ಪಿ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪನದ ಕೇಂದ್ರಬಿಂದು ಹರ್ನೈ ಪ್ರದೇಶದಲ್ಲಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ. ಹರ್ನೈ ಪ್ರಾಂತ್ಯದಲ್ಲಿ ಕಲ್ಲಿದ್ದಲು ಗಣಿಗಳು ಹೇರಳವಾಗಿವೆ. ಭೂಕಂಪದಿಂದಾಗಿ ಗಣಿಗಳು ಕುಸಿದಿರುವುದೇ ಸಾವು-ನೋವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ ಕೇವಲ ಹರ್ನೈ ಪ್ರಾಂತ್ಯದ ಮೇಲೆ ಮಾತ್ರವಲ್ಲದೇ, ಕ್ವೆಟ್ಟಾ, ಸಿಬಿ, ಪಿಶಿನ್, ಕಿಲಾ ಸೈಫುಲ್ಲಾ, ಚಮನ್, ಜಿಯಾರತ್ ಮತ್ತು ಝೋಬ್ ಪ್ರದೇಶಗಳ ಮೇಲೆಯೂ ಪರಿಣಾಮ ಬೀರಿದೆ. ಹೆಚ್ಚು ಮಂದಿ ಅಂದರೆ 13 ಮಂದಿ ಹರ್ನೈ ಜಿಲ್ಲೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲಿದ್ದಲು ಗಣಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದು, ಇನ್ನುಳಿದವರು ಮನೆಗಳು ಕುಸಿದು ಅಥವಾ ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾವನ್ನಪ್ಪಿದ 22 ಮಂದಿಯಲ್ಲಿ 6 ಮಕ್ಕಳಿದ್ದಾರೆ. ಘಟನೆಯಿಂದ ಪಾಕಿಸ್ತಾನದ ಆರು ಜಿಲ್ಲೆಗಳು ತೀವ್ರ ನಷ್ಟಕ್ಕೊಳಗಾಗಿವೆ.
ಪಾಕಿಸ್ತಾನದ ಈ ಪ್ರದೇಶದಲ್ಲೇಕೆ ಹೆಚ್ಚು ಭೂಕಂಪನ?
ಪಾಕಿಸ್ತಾನವು ಹಿಮಾಲಯದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶವು ಎರಡು ಭೂ ಫಲಕಗಳ (ಟೆಕ್ಟೋನಿಕ್ ಪ್ಲೇಟ್) ಮಧ್ಯೆ ಇರುವುದೇ ಭೂಕಂಪ ಸಂಭವಿಸಲು ಕಾರಣವಾಗಿದೆ. ಅಂದಹಾಗೆ ಭಾರತೀಯ ಮತ್ತು ಯುರೋಷಿಯನ್ ಭೂ ಫಲಕಗಳ ಮಧ್ಯಭಾಗದಲ್ಲಿ ಪಾಕಿಸ್ತಾನ ಇದೆ.
ಅದರಲ್ಲೂ, ಬಲೂಚಿಸ್ತಾನ ಪ್ರಾಂತ್ಯ ಭೂ ಫಲಕದ ಅಂತ್ಯದಲ್ಲಿರುವ ಕಾರಣದಿಂದ ಇಂಥ ಭೂಕಂಪಗಳು ಸಾಮಾನ್ಯವಾಗಿ ಆ ಪ್ರದೇಶದಲ್ಲಿ ಸಂಭವಿಸುತ್ತಿರುತ್ತವೆ. ಸಾಮಾನ್ಯವಾಗಿ ಪರ್ವತ ಪ್ರದೇಶ ಮತ್ತು ಬಯಲು ಪ್ರದೇಶಗಳಿಂದ ಬಲೂಚಿಸ್ತಾನ ಪ್ರಾಂತ್ಯವಿದ್ದು, ಭೂಕಂಪದ ಪರಿಣಾಮಗಳು ತೀವ್ರವಾಗಿರುತ್ತವೆ.
ಕರಾಳ ನೆನಪು:
ಸೆಪ್ಟೆಂಬರ್ 2013ರಂದು ಬಲೂಚಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿ 825 ಮಂದಿ ಅಸುನೀಗಿದ್ದರು. ಅವರನ್ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಆ ಸಂದರ್ಭದಲ್ಲಿ ಸಾವಿರಾರು ಮನೆಗಳು ನೆಲಸಮಗೊಂಡಿದ್ದವು.
ಪಾಕ್ ಆಕ್ರಮಿತ ಕಾಶ್ಮೀರ(PoK) ಕಂಡ ಅತ್ಯಂತ ಭೀಕರ ಭೂಕಂಪ 2005ರ ಅಕ್ಟೋಬರ್ 8ರಂದು ನಡೆದಿತ್ತು. ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ಇದ್ದ ಭೂಕಂಪ ಅತ್ಯಂತ ಪ್ರಬಲವಾಗಿತ್ತು. 16 ವರ್ಷಗಳ ಹಿಂದೆ ನಡೆದ ಈ ಭೂಕಂಪದಲ್ಲಿ 74 ಸಾವಿರ ಮಂದಿ ಸಾವನ್ನಪ್ಪಿ, 28 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು.
ಇದನ್ನೂ ಓದಿ: ಕಾಡೇ ಊರು..ಅಂಬಾಸಿಡರ್ ಕಾರೇ ಸೂರು.. ಚಂದ್ರನ ಬಾಳಲ್ಲಿ ಕಗ್ಗತ್ತಲು..!