ಕೊಲಂಬೊ (ಶ್ರೀಲಂಕಾ): ಸಮುದ್ರದಲ್ಲಿ ಎಕ್ಸ್ಪ್ರೆಸ್ ಪರ್ಲ್ ಕಂಟೇನರ್ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಅನೇಕ ಜಲಚರಗಳು ಪ್ರಾಣತೆತ್ತಿವೆ. ಒಟ್ಟು 118 ಆಮೆಗಳು, 17 ಡಾಲ್ಫಿನ್ಗಳು ಮತ್ತು ನಾಲ್ಕು ತಿಮಿಂಗಿಲಗಳ ಕಳೇ ಬರಗಳು ಶ್ರೀಲಂಕಾದ ಕಡಲ ತೀರಗಳಿಗೆ ತೇಲಿ ಬಂದಿವೆ ಎಂದು ವನ್ಯಜೀವಿ ಸಂರಕ್ಷಣಾ ಇಲಾಖೆ ತಿಳಿಸಿದೆ.
ಮೇ 20 ರಂದು ಭಾರತದಿಂದ ಶ್ರೀಲಂಕಾಗೆ ಬರುತ್ತಿದ್ದ ಸಿಂಗಾಪುರದ ಎಕ್ಸ್ಪ್ರೆಸ್ ಪರ್ಲ್ ಹಡಗು ಕೊಲಂಬೊ ಬಂದರಿಗೆ ಸಮೀಪದಲ್ಲಿದ್ದಾಗ ಅಗ್ನಿ ಅವಘಡಕ್ಕೆ ಸಾಕ್ಷಿಯಾಗಿತ್ತು. 25 ಟನ್ಗಳಷ್ಟು ನೈಟ್ರಿಕ್ ಆಮ್ಲ ಹಾಗೂ ರಾಸಾಯನಿಕಗಳು - ಸೌಂದರ್ಯ ವರ್ಧಕಗಳಿದ್ದ 1,486 ಕಂಟೇನರ್ಗಳನ್ನು ಹೊತ್ತಿದ್ದ ಹಡಗು ಇದಾಗಿತ್ತು.
ಇದನ್ನೂ ಓದಿ: ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಕೇಸ್; ದೋಷಿ ಡೆರೆಕ್ ಚೌವಿನ್‌ಗೆ 22.5 ವರ್ಷ ಜೈಲು ಶಿಕ್ಷೆ
ಬೆಂಕಿಯಿಂದ ಉಂಟಾದ ಮಾಲಿನ್ಯದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಸಮುದ್ರ ಜೀವಿಗಳು ಸಾವನ್ನಪ್ಪಿರುವುದು ವರದಿಯಾಗಿದ್ದು, ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಘಟನೆ ನಡೆದ ಬಳಿಕ ಆಮೆಗಳು, ಡಾಲ್ಫಿನ್ಗಳು ಮತ್ತು ತಿಮಿಂಗಿಲಗಳ ಕಳೇ ಬರಗಳು ಕಡಲ ತೀರಗಳಲ್ಲಿ ಪತ್ತೆಯಾಗುತ್ತಿವೆ.