ನ್ಯೂಯಾರ್ಕ್: 11 ದಿನಗಳ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿರುವ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಕದನ ವಿರಾಮದ ಒಪ್ಪಂದವನ್ನು ವಿಶ್ವದಾದ್ಯಂತದ ನಾಯಕರು ಸ್ವಾಗತಿಸಿದ್ದಾರೆ.
ಜೆರುಸಲೇಂನ ಅಲ್-ಅಕ್ಸಾ ಮಸೀದಿ ವಿಚಾರದಲ್ಲಿ ಉಲ್ಬಣಗೊಂಡಿದ್ದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದೀಗ ಎರಡೂ ರಾಷ್ಟ್ರಗಳು 'ಪರಸ್ಪರ ಮತ್ತು ಏಕಕಾಲಿಕ' ಕದನ ವಿರಾಮ ಘೋಷಿಸಲು ನಿರ್ಣಯ ಕೈಗೊಂಡಿವೆ. ಹಮಾಸ್ ಉಗ್ರರ ಗುಂಪು ಹಾಗೂ ಇಸ್ರೇಲ್ನ ಭದ್ರತಾ ಕ್ಯಾಬಿನೆಟ್ ಈ ವಿಚಾರವನ್ನು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ಇಸ್ರೇಲ್ನೊಂದಿಗೆ ಕದನ ವಿರಾಮ ಒಪ್ಪಂದವಾಗಿದೆ: ಹಮಾಸ್
"ಭೀಕರ ದಾಳಿಗಳ ಬಳಿಕ ಗಾಜಾ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಮಾಡಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಎಲ್ಲರೂ ಇದನ್ನು ಗಮನಿಸಬೇಕು. ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಲು ಗಂಭೀರವಾದ ಸಂವಾದವನ್ನು ಪ್ರಾರಂಭಿಸಿ ಇಸ್ರೇಲಿ ಮತ್ತು ಪ್ಯಾಲೆಸ್ತೀನಿಯನ್ ನಾಯಕರು ಶಾಂತಿಯನ್ನು ಪುನಃ ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಇನ್ನು ಈಗಾಗಲೇ ಅಮೆರಿಕ ಪ್ಯಾಲೆಸ್ತೀನ್ನ ಗಾಜಾಗೆ ನೆರವು ನೀಡುವುದಾಗಿ, ಪುನರ್ ರ್ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ. "ನಾನು ಇಂದು ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿಯೊಂದಿಗೆ ಮಾತನಾಡಿದ್ದೇನೆ. ಈಜಿಪ್ಟ್ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂಬ ಅವರ ಸ್ಪಷ್ಟನೆಯನ್ನು ನಾನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ನಾನು ಈ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೇನೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ವಿದೇಶಾಂಗ ಸಚಿವರು ಮತ್ತು ಪ್ರಾದೇಶಿಕ ನಾಯಕರನ್ನು ಭೇಟಿ ಮಾಡಲು ಎದುರು ನೋಡುತ್ತೇನೆ ಎಂದು" ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: 69 ಮಕ್ಕಳು ಸೇರಿ 256 ಮಂದಿ ಸಾವು
ಇಸ್ರೇಲ್ ಮತ್ತು ಗಾಜಾ ನಿರ್ಧಾರವನ್ನು ಶ್ಲಾಘಿಸಿರುವ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಕದನ ವಿರಾಮವನ್ನು ಗಮನಿಸಲು ನಾನು ಎಲ್ಲರಿಗೂ ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ. "11 ದಿನಗಳ ಸಂಘರ್ಷವನ್ನು ಕೊನೆಗೊಳಿಸುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಘೋಷಣೆ ಸ್ವಾಗತಾರ್ಹ. ನಾಗರಿಕರಿಗೆ ಶಾಂತಿ ಮತ್ತು ಸುರಕ್ಷತೆಯನ್ನು ಮರಳಿ ಪಡೆಯುವ ಅವಕಾಶ ಇದಾಗಿದೆ" ಎಂದು ಮೈಕೆಲ್ ಟ್ವೀಟ್ ಮಾಡಿದ್ದಾರೆ.