ಜಿನೀವಾ (ಸ್ವಿಟ್ಜರ್ಲೆಂಡ್): ಮಧ್ಯವರ್ತಿಗಳಿಂದ ಹೆಚ್ಚಿನ ದರದ ಲಸಿಕೆಗಳನ್ನು ಖರೀದಿಸುವ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೋಮವಾರ ಎಚ್ಚರಿಕೆ ನೀಡಿದೆ. ಅಂತಹ ದೇಶಗಳು ಡಬ್ಲ್ಯುಎಚ್‌ಒ ಪ್ರಮಾಣೀಕರಿಸಿದ ಲಸಿಕೆಗಳನ್ನೇ ಖರೀದಿಸಬೇಕು ಮತ್ತು ಉತ್ಪನ್ನದ ಮೂಲವನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಚ್ಚರಿಸಿದೆ.
"ನಾವು ಇತರ ಲಸಿಕೆಗಳ ಬಗೆಗಿನ ದೇಶಗಳ ಆತಂಕವನ್ನು ಸ್ವೀಕರಿಸಿದ್ದೇವೆ. ಮಧ್ಯವರ್ತಿಗಳು ಅದನ್ನು ತಯಾರಕರು ಮಾರಾಟ ಮಾಡಿದ್ದಕ್ಕಿಂತ ಹೆಚ್ಚಿನ ಬೆಲೆಗೆ (ಒಂದು ಲಸಿಕೆ) ಮಾರಾಟ ಮಾಡುತ್ತಾರೆ" ಎಂದು WHO ಸಹಾಯಕ ಮಹಾನಿರ್ದೇಶಕ ಮರಿಯಾಂಜೆಲಾ ಬಟಿಸ್ಟಾ ಗಾಲ್ವೊ ಸಿಮಾವೊ ಕಳವಳ ವ್ಯಕ್ತಪಡಿಸಿದರು.
ಲಸಿಕೆಗಳ ಖರೀದಿ ವಿಚಾರದಲ್ಲಿ ಮಧ್ಯವರ್ತಿಗಳ ಪಾತ್ರದ ಬಗ್ಗೆ ಮಾತನಾಡುತ್ತಾ, ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್(UAE) ನಲ್ಲಿರುವ ಮಧ್ಯವರ್ತಿಯೊಬ್ಬರು ಸ್ಪುಟ್ನಿಕ್ ಲಸಿಕೆಗಳನ್ನು ಘಾನಾ (ಪಶ್ಚಿಮ ಆಫ್ರಿಕಾದ ದೇಶ) ಮತ್ತು ಪಾಕಿಸ್ತಾನಗಳಿಗೆ ಮೂಲ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಿ ಸಿಕ್ಕಿಹಾಕಿಕೊಂಡಿದ್ದನ್ನು ನೆನಪಿಸಿದರು.
"ಅಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಕೋವಿಡ್ ಉತ್ಪನ್ನಗಳನ್ನು ವ್ಯಾಪಾರ ಮಾಡಲಾಗುತ್ತಿದೆ. ಆದ್ದರಿಂದ ನೀವು ಕೊರೊನಾ ಉತ್ಪನ್ನಗಳನ್ನು ಖರೀದಿಸುವ ಮೊದಲು ಅದರ ಮೂಲವನ್ನು ತಿಳಿದುಕೊಳ್ಳಬೇಕು" ಎಂದು ಸಲಹೆ ನೀಡಿದರು.
ವಿಶ್ವ ಆರೋಗ್ಯ ಸಂಸ್ಥೆ "ಪ್ರಮಾಣೀಕರಿಸಿದ" ಉತ್ಪನ್ನಗಳೊಂದಿಗೆ ಜನರಿಗೆ ಲಸಿಕೆ ನೀಡುವುದು ಮುಖ್ಯ ಎಂದು ಸಿಮಾವೊ ಹೇಳಿದರು.
ದೇಶಗಳು ತುರ್ತು ಪಟ್ಟಿಯಲ್ಲಿ ಸ್ಥಾನ ಪಡೆದ ಲಸಿಕೆಗಳನ್ನು ಬಳಸುತ್ತವೆ. ಆದ್ದರಿಂದ ಹೊಸ ಲಸಿಕೆಗಳನ್ನು ಅನುಮೋದಿಸಲು WHO ಬಳಸುವ ತುರ್ತು ಬಳಕೆ ಪಟ್ಟಿಯನ್ನು ಉಲ್ಲೇಖಿಸಲಾಗಿದೆ. ಇಲ್ಲಿಯವರೆಗೆ ಎಂಟು ಕೋವಿಡ್-19 ಲಸಿಕೆಗಳನ್ನು ತುರ್ತು ಬಳಕೆಗಾಗಿ WHO ಅನುಮೋದಿಸಿದೆ. ಇದರಲ್ಲಿ ಎರಡು ಚೀನಿ ಲಸಿಕೆಗಳಾದ ಸಿನೊಫಾರ್ಮ್ ಮತ್ತು ಸಿನೋವಾಕ್ ಸೇರಿವೆ. ಇವೆರಡನ್ನೂ ವಿಶ್ವದ ಹಲವಾರು ದೇಶಗಳಲ್ಲಿ ವಿತರಿಸಲಾಗಿದೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್..! ಏನಿದು ಮಹಾ ಸಾಹಸ?