ವಾಷಿಂಗ್ಟನ್ ಡಿಸಿ(ಯುಎಸ್): ರಿಪಬ್ಲಿಕನ್ ಪಕ್ಷ ಚುನಾವಣೆಯಲ್ಲಿ ಜಯ ಗಳಿಸಿದೆ. ಆದ್ದರಿಂದ ಅವರಿಗೆ ಹಕ್ಕಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಪ್ರೀಂಕೋರ್ಟ್‌ನ ಮುಂದಿನ ನ್ಯಾಯಮೂರ್ತಿಯಾಗಿ ಆ್ಯಮಿ ಕೋನಿ ಬ್ಯಾರೆಟ್‌ರನ್ನು ಆಯ್ಕೆ ಮಾಡಿರುವುದಕ್ಕೆ ಸಮರ್ಥನೆ ನೀಡಿದ್ದಾರೆ.
ಅಮೆರಿಕಾ ಚುನಾವಣೆ 2020ರ ಪೂರ್ವ ಚರ್ಚೆಯಲ್ಲಿ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ. ನಮಗೆ ಸೆನೆಟ್ ಇದೆ. ಹಾಗೆಯೇ ನಮಗೆ ಶ್ವೇತಭವನವಿದೆ. ಬ್ಯಾರೆಟ್ ಎಲ್ಲರಿಂದಲೂ ಗೌರವಿಸಲ್ಪಡುತ್ತಾರೆ. ಅವರು ಎಲ್ಲಾ ರೀತಿಯಲ್ಲೂ ಒಳ್ಳೆಯವರು. ಸುಪ್ರೀಂಕೋರ್ಟ್‌ಗೆ ಸೇವೆ ಸಲ್ಲಿಸಿದ ಇತರರಂತೆ ಅವರು ಕೂಡ ಯೋಗ್ಯರಾಗಿದ್ದಾರೆ. ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಮತ್ತು ಅವರನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು ನಮಗೆ ಇದೆ ಎಂದು ವಾದಿಸಿದ್ದಾರೆ.
ಬ್ಯಾರೆಟ್ ಆಯ್ಕೆಯ ಬಗ್ಗೆ ಟ್ರಂಪ್ ವಾದವನ್ನು ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ತೀವ್ರವಾಗಿ ಖಂಡಿಸಿದ್ದಾರೆ. ಸೆನೆಟ್ ಮತ್ತು ಅಧ್ಯಕ್ಷರಿಗೆ ಮತ ನೀಡುವ ಕಾರಣ ಸುಪ್ರೀಂಕೋರ್ಟ್ ನಾಮನಿರ್ದೇಶಿತ ಯಾರು ಎಂದು ಹೇಳಲು ಅಮೆರಿಕಾದ ಜನರಿಗೆ ಹಕ್ಕಿದೆ. ನಾವು ಈಗಾಗಲೇ ಚುನಾವಣೆಯ ಮಧ್ಯದಲ್ಲಿರುವುದರಿಂದ ಅವರಿಗೆ ಈಗ ಅವಕಾಶ ಸಿಗುವುದಿಲ್ಲ. ಆಗಬೇಕಾದ ವಿಷಯವೆಂದರೆ ನಾವು ಚುನಾವಣೆಯ ಫಲಿತಾಂಶಕ್ಕಾಗಿ ಕಾಯಬೇಕು ಎಂದು ಬಿಡೆನ್ ಇದಕ್ಕೆ ಪ್ರತ್ಯತ್ತರ ನೀಡಿದ್ದಾರೆ.
ಮುಂದಿನ ಅಧ್ಯಕ್ಷರು ಆಯ್ಕೆಯಾದ ನಂತರವೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಯನ್ನು ಭರ್ತಿ ಮಾಡುವಂತೆ ಬಿಡೆನ್ ಕಳೆದ ವಾರವಷ್ಟೇ ಈ ಬಗ್ಗೆ ಸೆನೆಟ್ಗೆ ಒತ್ತಾಯಿಸಿದ್ದರು. ರುತ್ ಬೇಡರ್ ಗಿನ್ಸ್‌ಬರ್ಗ್ ಸಾವಿನ ನಂತರ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸ್ಥಾನಕ್ಕೆ ಟ್ರಂಪ್ ಬ್ಯಾರೆಟ್‌ರನ್ನು ನೇಮಕ ಮಾಡಿದ್ದಾರೆ. ಇನ್ನು ಬಿಡೆನ್ ಮತ್ತು ಟ್ರಂಪ್ ನಡುವೆ ಇನ್ನೆರಡು ಚರ್ಚೆಗಳು ನಡೆಯಲಿವೆ. ಅಕ್ಟೋಬರ್ 15 ಮಿಯಾಮಿಯಲ್ಲಿ ಮತ್ತು ಅಕ್ಟೋಬರ್ 22ರಂದು ನ್ಯಾಶ್ವಿಲ್ಲೆಯಲ್ಲಿ ಚರ್ಚೆ ನಡೆಯಲಿವೆ.