ವಾಷಿಂಗ್ಟನ್,ಅಮೆರಿಕ : ಅಮೆರಿಕದಲ್ಲಿನ ಅವಳಿ ಕಟ್ಟಡಗಳ ಮೇಲೆ ಅಲ್ಖೈದಾ ದಾಳಿ ನಡೆಸಿದ ನಂತರ ಅಮೆರಿಕ ಸುಮಾರು ರಾಷ್ಟ್ರಗಳಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಿದೆ. ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಸಿರಿಯಾ, ಇರಾಕ್ ಮತ್ತು ಆಫ್ರಿಕಾದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಿರುವ ಅಮೆರಿಕಕ್ಕೆ ಆಗಿರುವ ನಷ್ಟದ ಬಗ್ಗೆ ವಿಶ್ವ ವಿದ್ಯಾಲಯವೊಂದು ವರದಿ ಬಿಡುಗಡೆ ಮಾಡಿದೆ.
ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯ ಈ ಕುರಿತು ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಸುಮಾರು 8 ಟ್ರಿಲಿಯನ್ ಡಾಲರ್ ನಷ್ಟವಾಗಿರಬಹುದು ಎಂದು ಅಂದಾಜಿಸಿದೆ. ಈ ಹಣ ಭಾರತದ ಪ್ರಸ್ತುತ ಜಿಡಿಪಿಯ ಮೂರರಷ್ಟಿದೆ ಎಂದು ಅಂದಾಜಿಸಲಾಗಿದೆ.
ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆಯುತ್ತೆ ಎಂದು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡುವಾಗ ನಾವು ಒಂದು ಟ್ರಿಲಿಯನ್ ಡಾಲರ್ಗಳಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದಿದ್ದರು. ಅವರು ಹೇಳಿದ ವೆಚ್ಚ ಪ್ರಮುಖ ವೆಚ್ಚವಾಗಿತ್ತೇ ವಿನಃ ಇತರ ಖರ್ಚುಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.
ಬ್ರೌನ್ ಯೂನಿವರ್ಸಿಟಿಯ ವ್ಯಾಟ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್ 2010ರಿಂದ 'ಕಾಸ್ಟ್ಸ್ ಆಫ್ ವಾರ್ ಪ್ರಾಜೆಕ್ಟ್' (Costs of War Project) ಎಂಬ ಅಧ್ಯಯನ ವರದಿಯನ್ನು ಪ್ರಕಟಿಸುತ್ತಿದೆ. ಇದೇ ಸಂಸ್ಥೆಯೇ ಅಮೆರಿಕದಲ್ಲಿ ಭಯೋತ್ಪಾದನಾ ದಾಳಿ ನಂತರ ಅಮೆರಿಕ ಮಾಡಿದ ಖರ್ಚುಗಳನ್ನು ಅಂದಾಜಿಸಿದೆ.
ವಿದ್ವಾಂಸರು, ಕಾನೂನು ತಜ್ಞರು, ಮಾನವ ಹಕ್ಕುಗಳ ತಜ್ಞರು, ವೈದ್ಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿಯಿದ್ದ ಸಮಿತಿಯೊಂದು ಅಮೆರಿಕ ಮಾಡಿದ ಖರ್ಚುಗಳನ್ನು ಅಂದಾಜಿಸಿದೆ. ಅಮೆರಿಕದ ಈ ಭಯೋತ್ಪಾದನಾ ವಿರೋಧಿ ಯುದ್ಧಗಳಿಂದ ವಿವಿಧ ವರ್ಗಗಳ ಜನರ ಮೇಲೆ ಆದ ಪ್ರಭಾವವನ್ನೂ ಕೂಡ ಇದು ವಿವರಿಸುತ್ತದೆ.
ಅಮೆರಿಕ ಮಾಡಿದ ಖರ್ಚು ನೇರ ಮತ್ತು ಪರೋಕ್ಷ ವೆಚ್ಚಗಳನ್ನು, ವೈದ್ಯಕೀಯ ಆರೈಕೆ ಮತ್ತು ಅಂಗವೈಕಲ್ಯಕ್ಕೆ ಪರಿಹಾರದ ವೆಚ್ಚಗಳನ್ನು, ಭಯೋತ್ಪಾದನಾ ನಿಗ್ರಹಕ್ಕೆ ತನ್ನ ದೇಶದಲ್ಲಿ ಕೈಗೊಂಡ ವೆಚ್ಚ ಮತ್ತು ಯುದ್ಧದ ಸಾಲದ ಮೇಲಿನ ಬಡ್ಡಿ ಪಾವತಿಗಳನ್ನೂ ಕೂಡ ಇದು ಹೊಂದಿದೆ ಎಂದು ಬ್ರೌನ್ ವಿವಿ ಹೇಳಿದೆ.
ಇದನ್ನೂ ಓದಿ: 'ಮಹಿಳೆಯರ ಹಕ್ಕುಗಳನ್ನು ಗೌರವಿಸಿ..': ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ