ನ್ಯೂಯಾರ್ಕ್: ಕೊರೊನಾ ವೈರಸ್ಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನ ಬಲಿಯಾಗುತ್ತಿರುವಂತೆಯೇ ಯುರೋಪ್, ಅಮೆರಿಕಗಳಲ್ಲಿ ನಿರುದ್ಯೋಗ ಸಮಸ್ಯೆಯೂ ಬೃಹದಾಕಾರ ತಾಳುತ್ತಿದೆ. ಸ್ಪೇನ್, ಇಟಲಿ ಮತ್ತು ಅಮೆರಿಕದ ನ್ಯೂಯಾರ್ಕ್ನಲ್ಲಿ ಕೊರೊನಾ ವೈರಸ್ ಹಿಡಿತ ಮೀರಿ ಹರಡುತ್ತಿದ್ದು, ಅಮೆರಿಕದಲ್ಲಿ ಕಳೆದ ಎರಡೇ ವಾರದಲ್ಲಿ 10 ಮಿಲಿಯನ್ ಜನ ಕೆಲಸ ಕಳೆದುಕೊಂಡಿದ್ದಾರೆ.
ನ್ಯೂಯಾರ್ಕ್ನಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯೂಯಾರ್ಕ್ನ ಸ್ಮಶಾನವೊಂದರ ಬಳಿ 185 ಜನರ ಶವಗಳು ಅಂತ್ಯಸಂಸ್ಕಾರಕ್ಕಾಗಿ ಕಾಯುತ್ತಿವೆ ಎಂದರೆ ಪರಿಸ್ಥಿತಿಯ ಭೀಕರತೆಯನ್ನು ಅರ್ಥ ಮಾಡಿಕೊಳ್ಳಬಹುದು.
ಜಗತ್ತಿನಾದ್ಯಂತ 1 ಮಿಲಿಯನ್ಗೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, 53 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸ್ಪೇನ್ನಲ್ಲಿ ಗುರುವಾರ ಒಂದೇ ದಿನ 950 ಜನ ಮೃತಪಟ್ಟಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಇಟಲಿಯಲ್ಲಿ ಮತ್ತೆ 760 ಸಾವು ಸಂಭವಿಸಿದ್ದು, ಸದ್ಯ ಹೊಸ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ.
ಫ್ರಾನ್ಸ್ನಲ್ಲಿ ಕಳೆದ ದಿನ 471 ಜನ ಮೃತರಾಗಿದ್ದು, ಒಟ್ಟು ಮೃತರ ಸಂಖ್ಯೆ 4,500 ದಾಟಿದೆ.
ಒಂದೆಡೆ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೆ ಮತ್ತೊಂದೆಡೆ ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿದೆ. ಕಳೆದ ಎರಡು ವಾರಗಳಲ್ಲಿ 10 ಮಿಲಿಯನ್ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. ಯುರೋಪ್ನಲ್ಲಿಯೂ ಕನಿಷ್ಠ ಒಂದು ಮಿಲಿಯನ್ ಜನ ನಿರುದ್ಯೋಗಿಗಳಾಗಿದ್ದಾರೆ. ಸ್ಪೇನ್ನಲ್ಲಿ ಮಾರ್ಚ್ ತಿಂಗಳೊಂದರಲ್ಲಿಯೇ 3 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ.