ನ್ಯೂಯಾರ್ಕ್: ಮಹಾಮಾರಿ ಕೊರೊನಾ ಅಬ್ಬರ ಅಮೆರಿಕದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗಾಗಲೇ ಲಕ್ಷಾಂತರ ಜನರಿಗೆ ಈ ಸೋಂಕು ತಗಲಿದ್ದು, ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಅಮೆರಿಕ ಅಧ್ಯಕ್ಷರು ವಾಸ ಮಾಡುವ ಶ್ವೇತ ಭವನದಲ್ಲಿ ಇದೀಗ ಇಬ್ಬರಿಗೆ ಡೆಡ್ಲಿ ವೈರಸ್ ಕಾಣಿಸಿಕೊಂಡಿದೆ.
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿ ಕೇಟಿ ಮಿಲ್ಲರ್ಗೆ ಡೆಡ್ಲಿ ವೈರಸ್ ಹಬ್ಬಿರುವುದು ಕನ್ಫರ್ಮ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಸವಾಗಿರುವ ಶ್ವೇತ ಭವನದಲ್ಲೇ ಇವರು ವಾಸವಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನ ಭೇಟಿಯಾಗಿದ್ದರು ಎನ್ನಲಾಗಿದೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಇವರು ಭೇಟಿ ಮಾಡಿಲ್ಲ.
ಈಗಾಗಲೇ, ಮಾಹಿತಿ ನೀಡಿರುವ ಅಲ್ಲಿನ ಅಧಿಕಾರಿಗಳು ಶ್ವೇತ ಭವನದಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲ ರೀತಿಯ ಮುಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಕೂಡ ಮಾಹಿತಿ ನೀಡಿದ್ದು, ನಾನು ಅವರೊಂದಿಗೆ ಸಂಪರ್ಕ ಹೊಂದಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಿಲಿಟರಿ ಸಹಾಯಕ ಕೊರೊನಾ ಪಾಸಿಟಿವ್ಗೆ ಒಳಗಾಗಿರುವ ಕಾರಣ ತಾವು ಪ್ರತಿದಿನ ಪರೀಕ್ಷೆ ಮಾಡಿಕೊಳ್ಳುತ್ತಿರುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು. ಇಲ್ಲಿಯವರೆಗೆ ಅಮೆರಿಕದಲ್ಲಿ 12,83,929 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10,07,756 ಜನರು ವೈರಸ್ನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 1,98,993 ಜನರು ಡಿಸ್ಚಾರ್ಜ್ ಆಗಿದ್ದು, 77,180 ಜನರು ಸಾವನ್ನಪ್ಪಿದ್ದಾರೆ.