ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಪತ್ನಿ ಕರೆನ್ ಪೆನ್ಸ್ ಕೊರೊನಾ ವೈರಸ್ಗೆ ಪರೀಕ್ಷೆ ನಡೆಸಿದ್ದಾರೆಂದು ಪತ್ರಿಕಾ ಕಾರ್ಯದರ್ಶಿಗಳಾದ ಕೇಟಿ ಮಿಲ್ಲರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಿಲ್ಲರ್, ಕೊವಿಡ್-19 ಟೆಸ್ಟ್ನಲ್ಲಿ ಉಪಾಧ್ಯಕ್ಷರು ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿಲ್ಲವೆಂದು ಫಲಿತಾಂಶ ಬಂದಿದ್ದು, ಖುಷಿಯ ಸಂಗತಿ ಎಂದು ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದ ವಿಚಾರ ಧೃಡಪಟ್ಟ ಹಿನ್ನಲೆ, ಉಪಾಧ್ಯಕ್ಷರು ಕೂಡಾ ತಮ್ಮ ಆರೋಗ್ಯ ಪರೀಕ್ಷಿಸಿದ್ದಾರೆ. ಪರಿಣಾಮ ಇಬ್ಬರಿಗೂ ಯಾವುದೇ ಸೋಂಕು ತಗುಲಿಲ್ಲವೆಂಬ ಫಲಿತಾಂಶ ಹೊರಬಿದ್ದಿದೆ.
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಉಪಾಧ್ಯಕ್ಷ ಮೈಕ್ ಪೆನ್ಸ್, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಪರೀಕ್ಷೆಗೆ ಒಳಪಡುವುದು ಪ್ರಮುಖವಾಗಿದೆ ಎಂದು ಅವರು ಹೇಳಿದ್ದಾರೆ.
ಯುಎಸ್ನಲ್ಲಿ ಈವರೆಗೆ ಒಟ್ಟು 15,000 ಕೊರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವರಲ್ಲಿ 200 ಮಂದಿ ಸಾವನ್ನಪ್ಪಿದ್ದಾರೆ.