ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಅಮೆರಿಕ ಮತ್ತು ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಡೆದ ಮೊದಲ ಭೇಟಿಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶ್ವೇತಭವನದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಸಭೆ ನಡೆಸಿದರು. ಈ ಸಮಯದಲ್ಲಿ ಭಾರತ - ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದರು. ಪ್ರಜಾಪ್ರಭುತ್ವ, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಮತ್ತು ಇಂಡೋ - ಪೆಸಿಫಿಕ್ ಸೇರಿದಂತೆ ಸಾಮಾನ್ಯ ಹಿತಾಸಕ್ತಿಯ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಿದರು.
ಇದನ್ನು ಓದಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭೇಟಿಯಾದ ಪ್ರಧಾನಿ ಮೋದಿ
ಇನ್ನು ಸಭೆಯ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, " ಕಮಲಾ ಹ್ಯಾರಿಸ್ ಅವರು, ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಾಗ ಅಮೆರಿಕ ಭದ್ರತೆ ಮತ್ತು ಭಾರತದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ಬೆಂಬಲ ನಿಯಂತ್ರಿಸುವ ಅವಶ್ಯಕತೆಯಿದೆ" ಅಂತ ಕಮಲಾ ಹ್ಯಾರಿಸ್ ಹೇಳಿರುವುದಾಗಿ ತಿಳಿಸಿದರು.
ದೇಶಗಳ ಜನರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಗಳನ್ನು ರಕ್ಷಿಸುವುದು ಎರಡು ರಾಷ್ಟ್ರಗಳ ಜವಾಬ್ದಾರಿಯಾಗಿದೆ ಎಂದು ಹ್ಯಾರಿಸ್ ಇದೇ ವೇಳೆ ಪ್ರತಿಪಾದಿಸಿದರು. "ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವಗಳು ಅಪಾಯದಲ್ಲಿರುವುದರಿಂದ, ನಾವು ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ತತ್ತ್ವಗಳನ್ನು ಮತ್ತು ಸಂಸ್ಥೆಗಳನ್ನು ರಕ್ಷಿಸುವುದು ಅತ್ಯಗತ್ಯ. ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ನಾವು ಏನು ಮಾಡಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಅದು ನಮ್ಮ ರಾಷ್ಟ್ರಗಳ ಮೇಲೆ ಹೊಣೆಗಾರಿಕೆಯಾಗಿದೆ. ನಮ್ಮ ದೇಶಗಳ ಜನರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಗಳನ್ನು ರಕ್ಷಿಸಬೇಕಾಗಿದೆ" ಎಂದು ಹ್ಯಾರಿಸ್ ಹೇಳಿದರು.
ಇಂದು ಶ್ವೇತಭವನದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಜೋ ಬೈಡೆನ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ ಅಮೆರಿಕ ಸಂಬಂಧ, ಮಾಡಿಕೊಂಡಿರುವ ಒಪ್ಪಂದಗಳ ಮುಂದುವರಿಕೆ, ಭಯೋತ್ಪಾದನೆ ನಿಗ್ರಹ, ವ್ಯಾಪಾರ ಸಂಬಂಧಗಳನ್ನ ಮತ್ತಷ್ಟು ಬಲಪಡಿಸುವಿಕೆ, ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆಗಳಿವೆ.