ವಾಷಿಂಗ್ಟನ್(ಅಮೆರಿಕ): ಪಾಕಿಸ್ತಾನದಿಂದ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆ ವಿಚಾರವಾಗಿ ಅಮೆರಿಕದ ರಕ್ಷಣಾ ಇಲಾಖೆ ಕಿಡಿಕಾರಿದ್ದು, ಪಾಕ್ ಪ್ರೇರಿತ ಭಯೋತ್ಪಾದನೆಗೆ ಅಲ್ಲಿಯೇ ಜನರೇ ಬಲಿಯಾಗುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಈ ವಿಚಾರವಾಗಿ ಪಾಕಿಸ್ತಾನದೊಂದಿಗೆ ಪ್ರಾಮಾಣಿಕ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ಪಾಕಿಸ್ತಾನದ ಕಡೆಗಿರುವ ಅಫ್ಘಾನಿಸ್ತಾನದ ಗಡಿಯಲ್ಲಿರುವ ಭಯೋತ್ಪಾದಕರ ಸ್ವರ್ಗವಾಗಿದೆ. ಆದರೂ ಪಾಕಿಸ್ತಾನದ ಬಗ್ಗೆ ನಮಗೆ ಪ್ರಾಮಾಣಿಕವಾದ ಕಾಳಜಿಯಿದೆ. ಇಂದಿಗೂ ಆ ಕಾಳಜಿ ಮುಂದುವರೆಯುತ್ತಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದಾರೆ.
ಜಗತ್ತಿನ ದೃಷ್ಟಿಯಲ್ಲಿ ಪಾಕಿಸ್ತಾನ ಯೋಚಿಸಬೇಕಿದೆ. ಅಫ್ಘಾನಿಸ್ತಾನದ ನೆರೆಯ ರಾಷ್ಟ್ರವಾಗಿರುವ ಅದು ಕೆಲವೊಂದು ಜವಾಬ್ದಾರಿ ಹೊರಬೇಕಿದೆ. ಭಯೋತ್ಪಾದನೆಯ ನಿರ್ಮೂಲನೆ ಯತ್ನ ಮಾಡಬೇಕಿದೆ ಎಂದು ಕಿರ್ಬಿ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನಿಗಳೂ ಬಲಿಯಾಗಿದ್ದಾರೆ..
ಪಾಕಿಸ್ತಾನಿ ಪ್ರೇರಿತ ಭಯೋತ್ಪಾದನೆಗೆ ಅಲ್ಲಿಯ ಜನರೇ ಬಲಿಯಾಗಿದ್ದಾರೆ ಎಂಬುದನ್ನು ಪಾಕಿಸ್ತಾನ ನೆನಪಿಸಿಕೊಳ್ಳಬೇಕು. ಯುದ್ಧದಿಂದ ಹಾನಿಗೆ ಒಳಗಾದ ದೇಶವಾದ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಸಾವಿರಾರು ಮಂದಿ ಭಯೋತ್ಪಾದಕರನ್ನು ಕಳುಹಿಸುತ್ತಿದೆ.
ತಾಲಿಬಾನಿಗಳಿಗೆ ಸುರಕ್ಷಿತ ತಾಣವನ್ನ ಪಾಕಿಸ್ತಾನ ಒದಗಿಸುತ್ತಿದೆ ಎಂದು ಅಫ್ಘಾನಿಸ್ತಾನದಲ್ಲಿ ಸರ್ಕಾರ ಹೇಳುತ್ತಿತ್ತು. ಏನೇ ಆದರೂ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಪ್ರಾಮಾಣಿಕ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಡ್ರೋನ್ ದಾಳಿ ನಡೆಸಲು ಹಕ್ಕಿದೆ..
ಅಫ್ಘಾನಿಸ್ತಾನದಲ್ಲಿ ಈಗಲೂ ಡ್ರೋನ್ ದಾಳಿ ನಡೆಸಲು ಅಮೆರಿಕಕ್ಕೆ ಹಕ್ಕು ಇದೆ. ಆ ದೇಶವನ್ನು ರಕ್ಷಿಸಲು ಬೇಕಾದ ಅಧಿಕಾರಗಳನ್ನು ಅಧಿಕಾರಗಳನ್ನು ಹೊಂದಿದ್ದೇವೆ ಎಂದು ನಾವು ನಂಬಿದ್ದೇವೆ ಎಂದು ಕಿರ್ಬಿ ಹೇಳಿದ್ದಾರೆ.
ಹಿಂದೊಮ್ಮೆ ಅಮೆರಿಕ ಡ್ರೋನ್ ದಾಳಿ ನಡೆಸಿದ್ದಾಗ ತಾಲಿಬಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ನಮ್ಮ ಹಿತಾಸಕ್ತಿಗಳನ್ನು ಮತ್ತು ಆಫ್ಘನ್ನಲ್ಲಿರುವ ಅಮೆರಿಕನ್ನರ ಹಿತಾಸಕ್ತಿ ಕಾಪಾಡಲು ಡ್ರೋನ್ ದಾಳಿ ನಡೆಸಬೇಕಾಯಿತು ಎಂದು ಸಮರ್ಥನೆ ನೀಡಿತ್ತು.
ಇದನ್ನೂ ಓದಿ: ಯುದ್ದ ವಿಮಾನಗಳ ನಿಗ್ರಹ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ ಉತ್ತರ ಕೊರಿಯಾ