ವಾಷಿಂಗ್ಟನ್: ಅಮೆರಿಕ ಹಾಗೂ ಭಾರತ ನಡುವಿನ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ನಡುವೆ ಮಾತುಕತೆ ನಡೆಯಿತು. ಪ್ರಾದೇಶಿಕ ಸಹಕಾರ ವಿಸ್ತರಣೆ ಹಾಗೂ ಒಗ್ಗಟ್ಟಾಗಿ ಕೆಲಸ ಮಾಡುವ ಬಗ್ಗೆ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿದರು.
ಕೋವಿಡ್-19 ವ್ಯಾಕ್ಸಿನೇಷನ್ ಪ್ರಯತ್ನ, ಪ್ರಾದೇಶಿಕ ಬೆಳವಣಿಗೆ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕದ ಪ್ರಮುಖ ಪಾಲುದಾರನಾಗಿ ಭಾರತದ ಪಾತ್ರದ ಬಗ್ಗೆ ಹಾಗೂ ಪ್ರಾದೇಶಿಕ ಸಹಕಾರ ವಿಸ್ತರಣೆ ಬಗ್ಗೆ ಬ್ಲಿಂಕೆನ್ ಒತ್ತಿಹೇಳಿದರು.
ಜಾಗತಿಕ ಬೆಳವಣಿಗೆಗಳ ಬಗ್ಗೆ ನಿಕಟವಾಗಿ ಸಮನ್ವಯಗೊಳಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಅಲ್ಲದೆ ಶೀಘ್ರದಲ್ಲಿ ವೈಯಕ್ತಿಕವಾಗಿ ಭೇಟಿ ಅವಕಾಶಕ್ಕೆ ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಅಮೆರಿಕದವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಬ್ಲಿಂಕೆನ್ ವಿಶ್ವದ ಇತರ ಸಹವರ್ತಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ.