ನ್ಯೂಯಾರ್ಕ್(ಅಮೆರಿಕ): ಯುನೈಟೆಡ್ ಸ್ಟೇಟ್ಸ್ನಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಳೆದೊಂದು ದಿನದಲ್ಲಿ ಹತ್ತು ಲಕ್ಷಕ್ಕೂ ಮೀರಿ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, 1,688 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಈ ಕುರಿತು ವಿವರ ನೀಡಿದ್ದು, ಅಮೆರಿಕದಲ್ಲಿ ಸದ್ಯ 18,500 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ ಎಂದು ತಿಳಿಸಿದೆ. ಈಗಾಗಲೇ ಅಮೆರಿಕದ ಒಟ್ಟು ಆಸ್ಪತ್ರೆಗಳಲ್ಲಿ ಶೇ. 78ರಷ್ಟು ಹಾಸಿಗೆಗಳು ಭರ್ತಿಯಾಗಿವೆ.
ಇದನ್ನೂ ಓದಿ: ಹೊಸ ವರ್ಷದಂದು ಗಲ್ವಾನ್ ವ್ಯಾಲಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಸೇನೆ
ಕಳೆದೆರಡು ವಾರದಲ್ಲೇ ಕೋವಿಡ್ ಪ್ರಕರಣದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದ್ದು, ಜಾಗತಿಕ ಮಟ್ಟದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಪ್ರತಿದಿನ ಲಕ್ಷಾಂತರ ಜನರು ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ಅಲೆ ಅಮೆರಿಕದಲ್ಲಿ ಕಡಿಮೆಯಾಗಿತ್ತು. ಆದರೆ ಡಿಸೆಂಬರ್ ಕೊನೆೆಯ ವಾರದಿಂದ ಮಾರಕ ಸೋಂಕು ಅಬ್ಬರಿಸುತ್ತಿದ್ದು, ಅಮೆರಿಕದ ಆಸ್ಪತ್ರೆಯಲ್ಲಿ ಕೊರೊನಾದಿಂದಾಗಿ ಲಕ್ಷಾಂತರ ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ವರದಿಯಾಗಿದೆ.
ಒಮಿಕ್ರಾನ್ ಕೂಡಾ ಏರಿಕೆ:
ಕೊರೊನಾ ಜೊತೆಗೆ ದೇಶದಲ್ಲಿ ಒಮಿಕ್ರಾನ್ ಕೂಡ ವೇಗವಾಗಿ ಹಬ್ಬುತ್ತಿದೆ. ಕಳೆದೊಂದು ವಾರದಿಂದ ಪ್ರತಿ 100 ಜನರಲ್ಲಿ ಒಬ್ಬರಿಗೆ ಸೋಂಕು ದೃಢಗೊಳ್ಳುತ್ತಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಅಂಕಿಅಂಶ ಕಲೆ ಹಾಕಿದೆ.