ವಾಷಿಂಗ್ಟನ್: ತಮ್ಮ ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ತನಿಖೆ ಮಾಡಲು ಉಕ್ರೇನ್ ಸರ್ಕಾರಕ್ಕೆ ಒತ್ತಡ ಹೇರಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಳೆದ ತಿಂಗಳು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ದೋಷಾರೋಪಣೆ ಮಾಡಿದ್ದು, ಜ.21 ರಿಂದ ಇದರ ವಿಚಾರಣೆಯನ್ನು ಅಮೆರಿಕದ ಸೆನೆಟ್ (ಮೇಲ್ಮನೆ) ನಡೆಸಲಿದೆ.
ಡೆಮಾಕ್ರೆಟಿಕ್ ಪಕ್ಷದವರೇ ಹೆಚ್ಚಿರುವ 435 ಸದಸ್ಯರನ್ನೊಳಗೊಂಡ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್, ಟ್ರಂಪ್ ವಿರುದ್ಧ ಅಧಿಕಾರ ದುರ್ಬಳಕೆಯ ಗಂಭೀರ ಆರೋಪ ಮಾಡಿತ್ತು. 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ಪ್ರತಿಸ್ಪರ್ಧಿ ಜೋ ಬಿಡನ್ ಸೇರಿದಂತೆ ತಮ್ಮ ದೇಶೀಯ ಪ್ರತಿಸ್ಪರ್ಧಿಗಳ ಚಿತ್ರಣವನ್ನು ಕೆಡಿಸಲು ಡೊನಾಲ್ಡ್ ಟ್ರಂಪ್ ಅಕ್ರಮವಾಗಿ ಉಕ್ರೇನ್ನಿಂದ ಸಹಾಯ ಕೋರಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೋಷಾರೋಪದ ಪರ ಸದನದಲ್ಲಿ ಮತಯಾಚನೆ ಮಾಡಲಾಗಿದ್ದು, ಸಂಸತ್ ಸದಸ್ಯರು ಮತ ಚಲಾವಣೆ ಮಾಡಿದ ಬಳಿಕ, ಕೆಳಮನೆಯಲ್ಲಿ ದೋಷಾರೋಪಣೆ ನಿರ್ಣಯ ಅಂಗೀಕರಿಸಲ್ಪಟ್ಟಿತ್ತು.
ಇದೀಗ ರಿಪಬ್ಲಿಕನ್ ಪಕ್ಷದವರೇ ಹೆಚ್ಚಾಗಿರುವ 100 ಸದ್ಯಸರನ್ನೊಳಗೊಂಡ ಸೆನೆಟ್, ಟ್ರಂಪ್ ಶ್ವೇತ ಭವನ ತೊರೆಯುವ ಮುನ್ನವೇ ಟ್ರಂಪ್ರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ. ಒಂದು ವಾರ ವಿಚಾರಣೆಯನ್ನು ಕಾಯ್ದಿರಿಸಲಾಗಿದ್ದು, ಸ್ಪೀಕರ್ ನ್ಯಾನ್ಸಿ ಪೆಲೋಸಿ ದೋಷಾರೋಪಣೆಯನ್ನು ಸೆನೆಟ್ಗೆ ಕಳುಹಿಸಿದ ಬಳಿಕ ಜ.21ರ ಮಂಗಳವಾರದಿಂದ ವಿಚಾರಣೆ ನಡೆಸಲಾಗುವುದು ಎಂದು ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.