ವಾಷಿಂಗ್ಟನ್: ಅಮೆರಿಕ ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನೆಲ್ ಅವರು ಇಂದು ಹೊರಬಿದ್ದ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಮೆಕ್‌ಗ್ರಾಂತ್ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದು, ಇಲ್ಲಿನ ಕೆಂಟುಕಿಯಿಂದ ಸತತ 7ನೇ ಬಾರಿ ಸೆನೆಟ್ಗೆ ಮರು ಆಯ್ಕೆಯಾಗಿದ್ದಾರೆ.
ಶೇ.79ರಷ್ಟು ಚಲಾವಣೆಯಾಗಿದ್ದ ಮತದಲ್ಲಿ ಮೆಕ್‌ಕಾನೆಲ್ ಲೀಡ್ ಕಾಯ್ದುಕೊಂಡಿದ್ದರು. ಇವರು ಮೊಟ್ಟ ಮೊದಲ ಬಾರಿಗೆ 1984ರಲ್ಲಿ ಸೆನೆಟ್ಗೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇನ್ನು, ವಿಜಯೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, ನ್ಯೂಯಾರ್ಕ್ ಅಥವಾ ಕ್ಯಾಲಿಫೋರ್ನಿಯಾದಿಂದ ಬಂದವರಲ್ಲದ ನಾಲ್ವರು ಕಾಂಗ್ರೆಸ್ ನಾಯಕರಲ್ಲಿ ನಾನು ಸಹ ಓರ್ವ ಎಂದಿದ್ದಾರೆ.
ಕೆಂಟುಕಿಯ ಜನತೆ ನನ್ನನ್ನು ರಾಜ್ಯದ ಇತಿಹಾಸದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೆನೆಟರ್ ಆಗಿ ಅಥವಾ ಸೆನೆಟ್ನಲ್ಲಿ ಅತ್ಯಂತ ದೀರ್ಘ ಸೇವೆ ಸಲ್ಲಿಸಿದ ರಿಪಬ್ಲಿಕ್ ನಾಯಕನನ್ನಾಗಿ ಪರಿವರ್ತಿಸುತ್ತಾರೆ ಎಂದು ನಾನೆಂದು ಊಹಿಸಿರಲಿಲ್ಲ. ಪ್ರತಿಯಾಗಿ ಕೆಂಟುಕಿಯ ಹಾಗೂ ರಾಜ್ಯದ ಒಳಿತಿಗಾಗಿ ಸೆನೆಟ್ನ ಹುದ್ದೆಯನ್ನು ನಿಭಾಯಿಸಿದ್ದೆವು ಎಂದಿದ್ದಾರೆ.
ಕೆಂಟುಕಿಯ ಜನತೆ ಆರ್ಥಿಕತೆಯನ್ನು ವೃದ್ಧಿಸುವ ಹಲವು ನೀತಿಗಳನ್ನು ಬಯಸುತ್ತಾರೆಯೇ ಹೊರತು ಯಾವತ್ತೂ ಕಾರ್ಮಿಕರನ್ನೂ ಸಂಕಷ್ಟಕ್ಕೆ ತಳ್ಳುವ ಸಮಾಜವಾದವನಲ್ಲ ಎಂದಿದ್ದಾರೆ. ಸದ್ಯ ಮೆಕ್ಕಾನೆಲ್ಗೆ 78 ವರ್ಷವಾಗಿದ್ದು, ಶೇ. 58.2ರಷ್ಟು ಮತಗಳಿಸಿ ಜಯ ದಾಖಲಿಸಿದ್ದಾರೆ.