ವಾಷಿಂಗ್ಟನ್ (ಅಮೆರಿಕ): ಅಧಿಕಾರಾವಧಿ ಮುಗಿಯುವ ಮುನ್ನವೇ ಚೀನಾಗೆ ಆಘಾತ ನೀಡಿರುವ ಟ್ರಂಪ್ ಆಡಳಿತ, ಚೀನಿ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಯುಎಸ್ ಸಂದರ್ಶಕರ ವೀಸಾ ಮಾನ್ಯತೆಯ ಅವಧಿಯನ್ನು ಹತ್ತು ವರ್ಷದಿಂದ ಒಂದು ತಿಂಗಳಿಗೆ ಕಡಿಮೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಇಲಾಖೆಯ ಅಧಿಕಾರಿಯೊಬ್ಬರು "ಇದು ನಮ್ಮ ರಾಷ್ಟ್ರವನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿಯ ದುರುದ್ದೇಶಪೂರಿತ ಪ್ರಭಾವದಿಂದ ರಕ್ಷಿಸಲು ನಮ್ಮ ನೀತಿ, ನಿಯಂತ್ರಣ ಮತ್ತು ಕಾನೂನು ಜಾರಿ ಕ್ರಮಗಳಿಗೆ ಅನುಗುಣವಾಗಿದೆ" ಎಂದು ಹೇಳಿದ್ದಾರೆ.
"ಯುಎಸ್ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯಡಿ, ಅಮೆರಿಕ ಮೌಲ್ಯಗಳಿಗೆ ಪ್ರತಿಕೂಲವಾದ ವ್ಯಕ್ತಿಗಳ ಗುಂಪುಗಳ ವೀಸಾ ಮಾನ್ಯತೆಯನ್ನು ಸೀಮಿತಗೊಳಿಸುವ ಅಧಿಕಾರ ರಾಜ್ಯ ಇಲಾಖೆಗೆ ಇದೆ" ಎಂದು ಹೇಳಿದ್ದಾರೆ.
ಚೀನಾದ ಪ್ರಜೆಗಳು ಮತ್ತು ಚೀನಿ-ಅಮೆರಿಕನ್ ಗುಂಪುಗಳು ಕಾನೂನು, ಪ್ರಾಮಾಣಿಕ ಮತ್ತು ಮುಕ್ತ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ, ವಾಕ್ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ಬಗ್ಗೆ ನಿಗಾ ವಹಿಸಲು, ಬೆದರಿಕೆ ಹಾಕಲು ಮತ್ತು ವರದಿ ಮಾಡಲು ಚೀನಿ ಕಮ್ಯುನಿಸ್ಟ್ ಪಾರ್ಟಿಯು ಅಮೆರಿಕಾಗೆ ಏಜೆಂಟರನ್ನು ಕಳುಹಿಸುತ್ತದೆ ಎಂದು ರಾಜ್ಯ ಇಲಾಖೆಯ ಅಧಿಕಾರಿ ಆರೋಪಿಸಿದ್ದಾರೆ.
"ಚೀನಿ ಕಮ್ಯನಿಸ್ಟ್ ಪಾರ್ಟಿಗೆ ದಶಕಗಳಿಂದ ನಾವು ಅಡೆತಡೆಯಿಲ್ಲದ ಪ್ರವೇಶವನ್ನು ಅನುಮತಿಸಿದ್ದೇವೆ, ಆದರೆ ಇದೇ ಸವಲತ್ತುಗಳು ಚೀನಾದಲ್ಲಿ ಅಮೆರಿಕ ನಾಗರಿಕರಿಗೆ ಸಿಗುತ್ತಿಲ್ಲ. ಸಮಾಜದೊಂದಿಗೆ ಮುಕ್ತ ಸಂವಹನ, ಆರ್ಥಿಕತೆ ಮತ್ತು ಪಾಶ್ಚಿಮಾತ್ಯ ತಂತ್ರಜ್ಞಾನಗಳ ಪ್ರವೇಶವು ಚೀನಾದ ಅಭಿವೃದ್ಧಿಗೆ ಸಹಾಯ ಮಾಡಿವೆ. ಆದರೆ ಚೀನಿ ಕಮ್ಯನಿಸ್ಟ್ ಪಾರ್ಟಿ ಮಾತ್ರ ಮುಕ್ತ ಜಗತ್ತಿಗೆ ಕೇವಲ ಮಾರ್ಕ್ಸ್ವಾದಿ - ಲೆನಿನ್ ವಾದ ಮತ್ತು ಹಗೆತನವನ್ನು ಹೆಚ್ಚಿಸಿತು"ಎಂದು ವಕ್ತಾರರು ಹೇಳಿದ್ದಾರೆ.