ವಾಷಿಂಗ್ಟನ್: ಕೋವಿಡ್ ರೂಪಾಂತರಿ ಡೆಲ್ಟಾ ಹಠಾತ್ ಆಗಿ ಏರಿಕೆ ಕಾಣುತ್ತಿದ್ದು ಅಮೆರಿಕದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದ ದಿನ ಅತೀ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು ಫೆಬ್ರವರಿ ತಿಂಗಳ ಬಳಿಕ ಮೊದಲ ಬಾರಿ ಭಾರೀ ಏರಿಕೆ ಕಂಡುಬಂದಿದೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಬೆಡ್ಗಳ ಸಮಸ್ಯೆಯೂ ಉಲ್ಬಣವಾಗಿದೆ. ಆಗಸ್ಟ್ 7ರ ವೇಳೆಗೆ 1 ಲಕ್ಷಕ್ಕಿಂತ ಹೆಚ್ಚು ದೈನಂದಿನ ಪ್ರಕರಣಗಳು ಯುಎಸ್ನಲ್ಲಿ ಕಂಡುಬರುತ್ತಿವೆ ಎಂದು ತಿಳಿದುಬಂದಿದೆ.
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿಯ ಪ್ರಕಾರ, "ಯುಎಸ್ ಈಗ ಪ್ರತಿದಿನ 1,00,000ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿದ್ದು, ದೇಶದ ಆರೋಗ್ಯ ವ್ಯವಸ್ಥೆಯು ಒತ್ತಡದಲ್ಲಿದೆ. ಹೀಗಾಗಿ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗಳಲ್ಲಿ ಅನೇಕ ದಿನಗಳವರೆಗೆ ಚಿಕಿತ್ಸೆ ಪಡೆಯುವುದು ಸಹ ಬೆಡ್ಗಳ ಕೊರತೆಗೆ ಕಾರಣವಾಗುತ್ತಿದೆ" ಎಂದು ಹೇಳಿದೆ.
ಯುಎಸ್ನಾದ್ಯಂತ ಕೊರೊನಾ ನಿಯಂತ್ರಿಸಲು ಹೋರಾಟ ನಡೆಸಲಾಗುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಪರಿಸ್ಥಿತಿಯು ಅಪಾಯಕಾರಿಯಾಗಿದೆ. ಫ್ಲೋರಿಡಾ ಆಸ್ಪತ್ರೆಯ ಅಸೋಸಿಯೇಶನ್‌ನ ಸಮೀಕ್ಷೆಯ ಪ್ರಕಾರ, ಕಳೆದ ಜುಲೈ 30ರಂದು ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಂದರೆ ಶೇ.13ರಷ್ಟು ಪ್ರಕರಣ ಹೆಚ್ಚಾಗಿದೆ ಎಂದು ತಿಳಿಸಿದೆ.