ವಾಷಿಂಗ್ಟನ್(ಅಮೆರಿಕ): ಭಾರತೀಯ ಮೂಲದ ಅಮೆರಿಕನ್ ಪುನೀತ್ ತಲ್ವಾರ್ ಅವರನ್ನು ಮೊರಾಕೊದ ರಾಯಭಾರಿಯಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಶ್ವೇತಭವನದ ಪತ್ರಿಕಾ ಪ್ರಕಟಣೆಯಲ್ಲಿ ಈ ಘೋಷಣೆ ಮಾಡಲಾಗಿದೆ. ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊಗೆ ಕ್ಯಾಂಡೇಸ್ ಬಾಂಡ್ ರಾಯಭಾರಿಯಾಗಿ ಘೋಷಿಸಲಾಗಿದೆ. ಕತಾರ್ ರಾಯಭಾರಿಯಾಗಿ ಟಿಮ್ಮಿ ಡೇವಿಸ್ ಅವರನ್ನು ನೇಮಕ ಮಾಡಿ ಅಮೆರಿಕ ಅಧ್ಯಕರು ಆದೇಶಿಸಿದ್ದಾರೆ.
ಯಾರಿವರು ಪುನೀತ್ ತಲ್ವಾರ್: ಭಾರತೀಯ ಮೂಲದ ಪುನೀತ್ ತಲ್ವಾರ್ ಅವರು ಅಮೆರಿಕ ವಿದೇಶಾಂಗ ಇಲಾಖೆ, ಶ್ವೇತಭವನ ಮತ್ತು ಅಮೆರಿಕದ ಸೆನೆಟ್‌ನಲ್ಲಿ ಹಿರಿಯ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ನಿರೂಪಣಾ ವಿಭಾಗದ ಜವಾಬ್ದಾರಿ ಸೇರಿ ಹಲವು ಸ್ಥಾನಗಳನ್ನು ಅಲಂಕರಿಸಿದ್ದರು. ಪ್ರಸ್ತುತ ಅವರು ವಿದೇಶಾಂಗ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಅವರು ರಾಜಕೀಯ - ಮಿಲಿಟರಿ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರ ವಿಶೇಷ ಸಹಾಯಕರಾಗಿ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವನ್ನು ಪುನೀತ್ ತಲ್ವಾರ್ ಅವರು ಹೊಂದಿದ್ದಾರೆ.
ಅಮೆರಿಕದ ಹೌಸ್ ಆಪ್ ರೆಪ್ರೆಜೆಂಟೆಟಿವ್ನಲ್ಲಿ ಅವರು ಅನುಪಮ ಸೇವೆ ಸಲ್ಲಿಸಿದ್ದು, ವಿದೇಶಾಂಗ ಇಲಾಖೆಯಲ್ಲಿ ಯೋಜನಾ ಸಿಬ್ಬಂದಿಯಾಗಿ ಗಮನ ಸೆಳೆದಿದ್ದಾರೆ. ಸರ್ಕಾರದ ಸೇವೆಯಲ್ಲಿದ್ದು ಕೊಂಡು ವಿಶೇಷ ಸಾಧನೆ ಮಾಡಿರುವ ಪುನೀತ್ ತಲ್ವಾರ್, ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ ಹಿರಿಯ ಫೆಲೋ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಪೆನ್ ಬೈಡನ್ ಸೆಂಟರ್‌ನಲ್ಲಿ ಸಂದರ್ಶಕ ಸ್ಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗಮನಿಸಿದ ಬೈಡನ್ ಆಡಳಿತ ಪುನೀತ್ ಅವರನ್ನು ಮೊರಾಕೊ ರಾಯಭಾರಿಯಾಗಿ ನೇಮಕ ಮಾಡಿದೆ ಎನ್ನಲಾಗಿದೆ.
ಇದನ್ನು ಓದಿ:ಸ್ಫೋಟಗೊಳ್ಳದ ಶಸ್ತ್ರಾಸ್ತ್ರ ನಿಷ್ಕ್ರಿಯಗೊಳಿಸಲು ವರ್ಷಗಳು ಬೇಕಾಗಬಹುದು: ಉಕ್ರೇನ್ ಅಳಲು