ವಾಷಿಂಗ್ಟನ್: ನೊವೆಲ್ ಕೊರೊನಾ ವೈರಸ್ "ಮಾನವ ನಿರ್ಮಿತವಲ್ಲ ಅಥವಾ ಆನುವಂಶಿಕವಾಗಿ ಮಾರ್ಪಡಿಸಲಾದ ಸೋಂಕಲ್ಲ'' ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರಂಭಿಕ ಅಭಿಪ್ರಾಯ ವ್ಯಕ್ತಪಡಿಸಿವೆ.
ಈ ವೈರಸ್ ಸೋಂಕು ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಅಥವಾ ಚೀನಾದ ಪ್ರಯೋಗಾಲಯದಲ್ಲಿ ಆಕಸ್ಮಿಕವಾಗಿ ಏನಾದರೂ ಅಪಘಾತ ಸಂಭವಿಸಿ ಸೃಷ್ಟಿಯಾಯಿತೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.
ನ್ಯಾಷನಲ್ ಇಂಟೆಲಿಜೆನ್ಸ್ನ ನಿರ್ದೇಶಕ ಕಚೇರಿಯಿಂದ ಅಮೆರಿಕ ಗೂಢಚರ ಏಜೆನ್ಸಿ ಈ ಹೇಳಿಕೆ ಪ್ರಕಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಿ ಬರುತ್ತದೆ. ಚೀನಾದ ಹೃದಯ ಭಾಗದಲ್ಲಿರುವ ವುಹಾನ್ನಲ್ಲಿ ಸಾಂಕ್ರಾಮಿಕ ರೋಗ ಹುಟ್ಟಿಕೊಂಡು ವಿಶ್ವಾದ್ಯಂತ 2,20,000ಕ್ಕಿಂತ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಇದು ಇಲ್ಲಿನ ಲ್ಯಾಬ್ನಲ್ಲೇ ಸೃಷ್ಟಿ ಆಯಿತು ಎಂಬುದು ಇದುವರೆಗೂ ಸಾಬೀತಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ನಾಲಿಗೆ ಹರಿಬಿಡುತ್ತಿದ್ದಾರೆ. ಭೌಗೋಳಿಕ ರಾಜಕೀಯದಿಂದ ಹಿಡಿದು ವ್ಯಾಪಾರ ಪಾಲುದಾರಿಕೆಯವರೆಗೂ ಡ್ರ್ಯಾಗನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 'ಕೋವಿಡ್-19 ಹಬ್ಬಿಸಿ, ಆರಂಭದಲ್ಲಿ ಅದರ ಬಗ್ಗೆ ಎಲ್ಲವೂ ತಿಳಿದಿದ್ದರೂ ಮಾಹಿತಿ ನೀಡಲಿಲ್ಲ. ತ್ವರಿತವಾಗಿ ಕಾರ್ಯಪ್ರವೃತವಾಗುವಲ್ಲಿ ಚೀನಾ ವಿಫಲವಾಗಿದೆ' ಎಂದು ಆರೋಪಿಸಿದ್ದರು.
ಕೋವಿಡ್-19 ವೈರಸ್ ಮಾನವ ನಿರ್ಮಿತವಲ್ಲ ಅಥವಾ ಅನುವಂಶಿಕವಾಗಿ ಮಾರ್ಪಡಲಿಲ್ಲ ಎಂಬ ವ್ಯಾಪಕವಾದ ವೈಜ್ಞಾನಿಕ ಒಮ್ಮತಾಭಿಪ್ರಾಯ ಗುಪ್ತಚರ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆ ಹೊರಬಿದ್ದಿದೆ.
ಈ ಸೋಂಕು, ಸೋಂಕಿತ ಪ್ರಾಣಿಗಳ ಸಂಪರ್ಕದ ಮೂಲಕ ಬಂದಿದೆಯಾ ಅಥವಾ ವುಹಾನ್ನ ಪ್ರಯೋಗಾಲಯದಲ್ಲಿ ಸಂಭವಿಸಿದ ಅಪಘಾತದ ಪರಿಣಾಮವೋ ಎಂಬುದನ್ನು ನಿರ್ಧರಿಸಲು ಪರಿಶೀಲನೆ ನಡೆಸಬೇಕಿದೆ. ಹೊರಹೊಮ್ಮುತ್ತಿರುವ ಮಾಹಿತಿ ಮತ್ತು ಸವಾಲುಗಳನ್ನು ಗುಪ್ತಚರ ತಂಡ ಕಠಿಣವಾಗಿ ಪರಿಶೀಲಿಸುವುದನ್ನು ಮುಂದುವರೆಸುತ್ತದೆ ಎಂದೂ ಹೇಳಿದೆ.