ವಾಷಿಂಗ್ಟನ್ (ಅಮೆರಿಕ): 2021ರಿಂದ ಈವರೆಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಶೇ.7.5ರಷ್ಟು ಏರಿಕೆಯಾಗಿದ್ದು, ಪರಿಣಾಮ ಈ ಬಾರಿಯ ಜನವರಿ ತಿಂಗಳಲ್ಲಿ ಅಮೆರಿಕ ಹಣದುಬ್ಬರ ಹೆಚ್ಚಳವಾಗಿದೆ. 40 ವರ್ಷಗಳಲ್ಲೇ ಯುಎಸ್ ಹಣದುಬ್ಬರವು ಅತ್ಯಧಿಕ ಮಟ್ಟವನ್ನು ತಲುಪಿದೆ ಎಂದು ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ವರದಿ ಮಾಡಿದೆ.
ಗ್ರಾಹಕರ ಬೆಲೆ ಸೂಚ್ಯಂಕ (CPI) ಸಮೀಕ್ಷೆಯು ವಿವಿಧ ರೀತಿಯ ಸರಕುಗಳ ವೆಚ್ಚವನ್ನು ಅಳೆಯುತ್ತದೆ. ಕಳೆದ ಡಿಸೆಂಬರ್‌ನಿಂದ ಸಿಪಿಐ ಪ್ರಮಾಣವು ಶೇ.0.6 ರಷ್ಟು ಏರಿಕೆಯಾಗಿದ್ದು, 1982ರ ಫೆಬ್ರವರಿ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೋವಿಡ್ನಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಪ್ರಭಾವ ಬೀರಿದ್ದು, ಹೆಚ್ಚುತ್ತಿರುವ ಬೇಡಿಕೆ ಮತ್ತು ಪೂರೈಕೆಯ ಕೊರತೆಯಿಂದಾಗಿ ಅಮೆರಿಕದಲ್ಲಿ ಹಣದುಬ್ಬರ ಗರಿಷ್ಠ ಮಟ್ಟ ತಲುಪಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಡಿಸೆಂಬರ್‌ನಲ್ಲಿ ಶೇ.0.5 ರಷ್ಟಿದ್ದ ಆಹಾರ ಸೂಚ್ಯಂಕವು ಜನವರಿಯಲ್ಲಿ ಶೇ.0.9ಕ್ಕೆ ಏರಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಲ್ಲಿ ಮಾರಾಟವಾದ ಕಾರುಗಳ ಬೆಲೆ 40.5% ರಷ್ಟು ಹೆಚ್ಚಾಗಿದೆ. ವಸತಿ ವೆಚ್ಚವು ಕಳೆದ ವರ್ಷಕ್ಕಿಂತ ಈ ವರ್ಷ 4.4% ರಷ್ಟು ಹೆಚ್ಚಾಗಿದೆ. ಅನಿಲ ದರ ಕೂಡ ಸಾಕಷ್ಟು ಬಾರಿ ಹೆಚ್ಚಳವಾಗಿದೆ.
ಇದನ್ನೂ ಓದಿ: ನೂರನೇ ವರ್ಷದ ಗುರಿ ಇಟ್ಟುಕೊಂಡು ಬಜೆಟ್ ಮಂಡನೆ: ನಿರ್ಮಲಾ ಸೀತಾರಾಮನ್ ಸಮರ್ಥನೆ
ಅಷ್ಟೇ ಅಲ್ಲ, ಫೆಡರಲ್ ರಿಸರ್ವ್ ಕೂಡ ಮಾರ್ಚ್‌ನಲ್ಲಿ ಬಡ್ಡಿದರಗಳನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಸೂಚಿಸಿದೆ. ಈ ಹಿಂದೆ ವರ್ಜೀನಿಯಾದಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, "ಆಹಾರ ಬೆಲೆಗಳು ಹೆಚ್ಚಿವೆ ಎಂದು ನನಗೆ ತಿಳಿದಿದೆ. ಅದನ್ನು ಇಳಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದ್ದರು.