ಹೈದರಾಬಾದ್; ಮನೆಯಲ್ಲಿಯೇ ಕೋವಿಡ್ ಸೋಂಕು ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಬಹುದಾದ ಟೆಸ್ಟಿಂಗ್ ಕಿಟ್ ಬಳಸಲು ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇಲಾಖೆ (FDA) ಅನುಮತಿ ನೀಡಿದೆ. 'ತುರ್ತು ಸಂದರ್ಭ ಬಳಕೆ' (EUA) ನಿಯಮಗಳಡಿ ಲ್ಯಾಬ್ಕಾರ್ಪ್ ಸಂಸ್ಥೆಗೆ ಈ ಅನುಮತಿ ನೀಡಲಾಗಿದ್ದು, ಕೋವಿಡ್-19 RT-PCR ಟೆಸ್ಟ್ನೊಂದಿಗೆ ಇದನ್ನು ಬಳಸಬಹುದು. ರೋಗಿಯು ಸ್ವತಃ ಸಂಗ್ರಹಿಸಿದ ಮೂಗಿನ ದ್ರಾವಣ ಮಾದರಿಯನ್ನು ಈ ಕಿಟ್ ಬಳಸಿ ಟೆಸ್ಟ್ ಮಾಡಬಹುದು.
ಲ್ಯಾಬ್ಕಾರ್ಪ್ಗೆ ಎಫ್ಡಿಎ ಮಾರ್ಚ್ 16 ರಂದು ಪ್ರಥಮ ಬಾರಿಗೆ 'ತುರ್ತು ಸಂದರ್ಭ ಬಳಕೆ' ಅನುಮತಿ ನೀಡಿತ್ತು. ಆದರೆ ವೈದ್ಯಕೀಯ ಸಿಬ್ಬಂದಿ ಸಂಗ್ರಹಿಸುವ ಮೇಲ್ಮಟ್ಟ ಹಾಗೂ ಕೆಳಮಟ್ಟದ ಉಸಿರಾಟ ಸ್ಯಾಂಪಲ್ ಸಂಗ್ರಹಣೆಗೆ ಮಿತಿ ನಿಗದಿಪಡಿಸಲಾಗಿದೆ.
"ಕೊರೊನಾ ವೈರಸ್ನ ಸಂಕಷ್ಟದ ಅವಧಿಯಲ್ಲಿ ವೈರಸ್ ಸೋಂಕು ಪತ್ತೆ ವಿಧಾನಗಳ ಅನ್ವೇಷಣೆಗೆ ಎಲ್ಲ ಸಹಕಾರ ನೀಡಲಾಗುತ್ತಿದ್ದು, ರೋಗಿಗಳಿಗೆ ನಿಖರ ರೋಗ ನಿರ್ಣಯ ಫಲಿತಾಂಶ ಒದಗಿಸಲು ಯತ್ನಿಸಲಾಗುತ್ತಿದೆ. ಹಾಗೆಯೇ ಮನೆಯಲ್ಲಿಯೇ ರೋಗಿಗಳ ವಿಶ್ವಾಸಾರ್ಹ ಹಾಗೂ ನಿಖರ ಸ್ಯಾಂಪಲ್ ಸಂಗ್ರಹಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ." ಎಂದು ಎಫ್ಡಿಎ ಚೇರಮನ್ ಸ್ಟೀಫನ್ ಹಾನ್ ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ಈ ಟೆಸ್ಟಿಂಗ್ ಕಿಟ್ ಅನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಸೋಂಕು ತಗುಲುವ ಹೆಚ್ಚಿನ ಅಪಾಯ ಹೊಂದಿರುವ, ಮುಂಚೂಣಿಯಲ್ಲಿ ನಿಂತು ಚಿಕಿತ್ಸೆ ನೀಡುವ ಸಿಬ್ಬಂದಿಗಾಗಿ ಬಳಸಲಾಗುವುದು ಎಂದು ಲ್ಯಾಬ್ಕಾರ್ಪ್ ಹೇಳಿದೆ.
ಈ 'ತುರ್ತು ಸಂದರ್ಭ ಬಳಕೆ' ಕಿಟ್ಗಳನ್ನು ಲ್ಯಾಬ್ಕಾರ್ಪ್ ತಯಾರಿಸಲು ಮುಂದಾಗಿದೆ. ಆದರೆ ಯಾವುದೇ ರೋಗಿಯು ಕಿಟ್ ಬಳಸುವ ಮುನ್ನ ಅಧಿಕೃತವಾಗಿ ವೈದ್ಯಕೀಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಬರುವ ಕೆಲ ವಾರಗಳಲ್ಲಿ ಸಾಕಷ್ಟು ಕಿಟ್ಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿದ್ದರೂ, ನಿಖರವಾಗಿ ಎಷ್ಟು ಸಂಖ್ಯೆಯ ಕಿಟ್ಗಳನ್ನು ತಯಾರಿಸಲಿದೆ ಅಥವಾ ಬಿಡುಗಡೆ ಮಾಡಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
'ತುರ್ತು ಸಂದರ್ಭ ಬಳಕೆ' ನಿಯಮದಡಿ ಮನೆಯಲ್ಲಿಯೇ ರೋಗಿಯ ಸ್ಯಾಂಪಲ್ ಸಂಗ್ರಹಿಸಬಹುದೆಂದು ತಿಳಿಸಲಾಗಿದ್ದರೂ, ಲ್ಯಾಬ್ಕಾರ್ಪ್ನ ಕೇಂದ್ರಗಳೇ ಟೆಸ್ಟಿಂಗ್ ನಿರ್ವಹಿಸಬೇಕು. ಲ್ಯಾಬ್ಕಾರ್ಪ್ ತಾನೇ ಸ್ಥಾಪಿಸಿದ ಅತಿ ಸಂಕೀರ್ಣ ಟೆಸ್ಟಿಂಗ್ ಪ್ರಯೋಗಾಲಯಗಳಾದ ಲ್ಯಾಬ್ಕಾರ್ಪ್ ಎಸೋಟೆರಿಕ್ ಟೆಸ್ಟಿಂಗ್ ಸೆಂಟರ್ ಹಾಗೂ ಇತರ ಕ್ಲಿನಿಕಲ್ ಲ್ಯಾಬೊರೇಟರಿ ಇಂಪ್ರೂವ್ಮೆಂಟ್ ಅಮೆಂಡಮೆಂಟ್ಸ್ ಪ್ರಮಾಣೀಕರಿಸಿದ ಪ್ರಯೋಗಾಲಯಗಳಲ್ಲಿಯೇ ಇಂಥ ಟೆಸ್ಟಿಂಗ್ ನಡೆಸಲು ಅವಕಾಶ ನೀಡಲಾಗಿದೆ.
ಆರೋಗ್ಯ ಕಾರ್ಯಕರ್ತರು ಹಾಗೂ ರೋಗಿಗಳಿಗೆ ವಾಸ್ತವ ವರದಿ ನೀಡುವಂತೆ ಮತ್ತು ಅಧಿಕೃತ ಪ್ರಯೋಗಾಲಯಗಳಿಗೆ ಪ್ರಮಾಣಿತ ಪರೀಕ್ಷಾ ವಿಧಾನಗಳ ಮಾಹಿತಿ ನೀಡುವುದು ಸೇರಿದಂತೆ ಇನ್ನೂ ಹಲವಾರು ಷರತ್ತುಗಳನ್ನು ಲ್ಯಾಬ್ಕಾರ್ಪ್ಗೆ ವಿಧಿಸಲಾಗಿದೆ.