ವಾಷಿಂಗ್ಟನ್: ಆಗಸ್ಟ್ 15 ರಂದು ಭಾರತ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಈ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆಗೂ ಮುಂಚಿತವಾಗಿ ಯುಎಸ್ ಕಾಂಗ್ರೆಸ್ಸಿಗರು ಭಾರತವನ್ನು ಅಭಿನಂದಿಸಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹಲವು ವಿಶೇಷತೆಗಳಿವೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿ ಎಂದಿನಂತೆ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಇದೀಗ 75 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಅಮೆರಿಕದ ಪ್ರಭಾವಿ ಕಾಂಗ್ರೆಸಿಗರು ಭಾರತವನ್ನು ಅಭಿನಂದಿಸಿದ್ದಾರೆ.
ಕಾಂಗ್ರೆಸ್ನ ಸ್ಯಾನ್ಫೋರ್ಡ್ ಬಿಷಪ್ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ನಡೆದ ಸಭೆಯಲ್ಲಿ, ಅನೇಕ ವರ್ಷಗಳಿಂದ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಉತ್ತಮ ಐತಿಹಾಸಿಕ ಸಂಬಂಧಗಳನ್ನು ಹೊಂದಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವು ಅಮೆರಿಕದ ನಾಗರಿಕ ಹಕ್ಕುಗಳ ಆಂದೋಲನವನ್ನು ಹೆಚ್ಚು ಪ್ರಭಾವಿಸಿದೆ. ಭಾರತದ ಜನತೆಗೆ ಮುಂಚಿತವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ ಎಂದಿದ್ದಾರೆ.
ಭಾರತೀಯ ಅಮೆರಿಕನ್ನರು ಯುಎಸ್ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭಾರತದ ವೈದ್ಯರು, ವಕೀಲರು, ವಿಜ್ಞಾನಿಗಳು, ಉದ್ಯಮಿಗಳು, ಕಲಾವಿದರು ಶ್ವೇತಭವನದಲ್ಲಿ ಅಸಂಖ್ಯಾತ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ತಾಯಿ ಕೂಡ ಭಾರತೀಯರಾಗಿದ್ದರು ಎಂದು ಬಿಷಪ್ ಹೇಳಿದ್ದಾರೆ.