ವಾಷಿಂಗ್ಟನ್, ಅಮೆರಿಕ: ಭಾರತ-ಚೀನಾ ನಡುವಿನ ಗಡಿ ವಿವಾದವನ್ನು ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ಮಾಹಿತಿ ನೀಡಿದ್ದಾರೆ.
ಸೋಮವಾರ ವಿದೇಶಾಂಗ ಸಂಬಂಧಗಳ ಬಗ್ಗೆ ಮಾತನಾಡಿದ ಜೆನ್ ಸಾಕಿ ಚೀನಾ ನೆರೆಹೊರೆಯವರನ್ನು ಬೆದರಿಸಲು ಪ್ರಯತ್ನಿಸುತ್ತಿದೆ. ಚೀನಾದ ಈ ನಡೆಯಿಂದ ನಮಗೆ ಕಳವಳ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಗಡಿ ವಿವಾದಗಳನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದನ್ನು ಬೆಂಬಲಿಸುತ್ತೇವೆ. ಪ್ರಪಂಚದ ಎಲ್ಲಾ ರಾಷ್ಟ್ರಗಳು ಚೀನಾವನ್ನು ಹೇಗೆ ನೋಡುತ್ತಿವೆ ಎಂಬುದು ನಮಗೆ ಗೊತ್ತು ಎಂದು ಜೆನ್ ಸಾಕಿ ಹೇಳಿದ್ದಾರೆ.
ಭಾರತ-ಚೀನಾ ಗಡಿ ವಿವಾದದ ಪ್ರಶ್ನೆ ಬಂದಾಗ ನಾವು ನಮ್ಮ ಪಾಲುದಾರ ರಾಷ್ಟ್ರದೊಂದಿಗೆ ನಿಲ್ಲುತ್ತೇವೆ ಎಂದಿರುವ ಜೆನ್ ಸಾಕಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ಇನ್ನು ಪೂರ್ವ ಲಡಾಖ್ನಲ್ಲಿರುವ ಗಡಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾ ನಡುವಿನ 14ನೇ ಸುತ್ತಿನ ಮಾತುಕತೆಯನ್ನು ಜನವರಿ 12ರಂದು ನಡೆಸಲಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಇದಾಗಿದ್ದು, ಈ ಹಿಂದೆ ಸುಮಾರು 3 ತಿಂಗಳ ಹಿಂದೆ ಚೀನಾದೊಂದಿಗೆ ಮಾತುಕತೆ ನಡೆಸಲಾಗಿತ್ತು.
ಇದನ್ನೂ ಓದಿ: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷ ಶಿಕ್ಷೆ