ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವೆ ಏರ್ಪಟ್ಟಿದ್ದ ವಾಣಿಜ್ಯ ಸಮರ ಕೊನೆಗಾಣಿಸಲು ಈ ಎರಡೂ ದೇಶಗಳು ಮೊದಲ ಹಂತದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಪ್ರೀಮಿಯರ್ ಲಿಯು ಹೆ ಅವರು ವ್ಯಾಪಾರ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಯುಎಸ್-ಚೀನಾ ವ್ಯಾಪಾರಗಳ ಸಮಾಲೋಚನಾ ತಂಡದ ಮುಖ್ಯಸ್ಥರಾಗಿ ಲಿಯು ಹೆ ಅವರು ಕಾರ್ಯ ನಿರ್ಹಹಿಸುತ್ತಿದ್ದಾರೆ.
25 ಬಿಲಿಯನ್ ಡಾಲರ್ ಮೌಲ್ಯದ ಚೀನಾ ಸರಕುಗಳ ಮೇಲಿನ ಸುಂಕವನ್ನು ಅಮೆರಿಕ ಕಡಿತಗೊಳಿಸಿದ ಬಳಿಕ 2018ರಿಂದ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ಪ್ರಾರಂಭವಾಗಿತ್ತು. ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಕ್ರಮವಾಗಿ ಶೇ.25 ಮತ್ತು ಶೇ.10ರಷ್ಟು ಸುಂಕವನ್ನು ಅಮೆರಿಕ ವಿಧಿಸಿತ್ತು.
ಅಮೆರಿಕದ ಈ ಧೋರಣೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಉಭಯ ರಾಷ್ಟ್ರಗಳ 40 ವರ್ಷಗಳ ವಾಣಿಜ್ಯ ಸಂಬಂಧದಲ್ಲಿ ಬಿರುಕು ಮೂಡಿತ್ತು. ಈಗ ಉಭಯ ದೇಶಗಳು ಒಂದಾಗಿದ್ದು, ಇಷ್ಟೂ ದಿನವಿದ್ದ ಸಮರ ಅಂತ್ಯಗೊಂಡಂತಾಗಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟ್ರಂಪ್ ಮಾತನಾಡಿ, ಚೀನಾಕ್ಕೆ ಭೇಟಿ ನೀಡುವ ದಿನಗಳು ಬಹಳ ದೂರವಿಲ್ಲ ಎಂದು ಹೇಳಿದರು.