ವಾಷಿಂಗ್ಟನ್(ಅಮೆರಿಕ): ಕೋವಿಡ್ ಎಲ್ಲಾ ರಾಷ್ಟ್ರಗಳ ಮೇಲೆಯೂ ದುಷ್ಪರಿಣಾಮ ಉಂಟು ಮಾಡಿದೆ. ಆರ್ಥಿಕವಾಗಿ ಸಾಕಷ್ಟು ಮುಂದುವರಿದ ರಾಷ್ಟ್ರಗಳೂ ಕೋವಿಡ್ ಪೆಟ್ಟಿಗೆ ತತ್ತರಿಸಿವೆ. ವಿಶ್ವದ ದೊಡ್ಡಣ್ಣನ ಆರ್ಥಿಕತೆ ಕೂಡಾ ಹಳ್ಳ ಹಿಡಿದಿದೆ.
ಹೌದು.. ಭಾರತದಲ್ಲಿ ಸಾಮಾನ್ಯವಾಗಿ ಬಜೆಟ್ ವರ್ಷ ಫೆಬ್ರವರಿಯಲ್ಲಿ ಮಂಡಿಸುವಂತೆ, ಅಮೆರಿಕದಲ್ಲಿ ಬಜೆಟ್ ಅನ್ನು ಪ್ರತಿ ವರ್ಷ ಅಕ್ಟೋಬರ್ನಲ್ಲಿ ಮಂಡಿಸಲಾಗುತ್ತದೆ. ಅಂದರೆ, ಅಮೆರಿಕದಲ್ಲಿ ಸೆಪ್ಟೆಂಬರ್ನಲ್ಲಿ ಆರ್ಥಿಕ ವರ್ಷ ಕೊನೆಗೊಳ್ಳುತ್ತದೆ.
ಈಗ ಅಮೆರಿಕದಲ್ಲಿ ಬಜೆಟ್ ಅವಧಿ ಮುಗಿಯಲು ಕೇವಲ 15 ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ವರೆಗಿನ ಬಜೆಟ್ ಲೆಕ್ಕವನ್ನು ಹಾಕಲಾಗಿದೆ. ಇದರ ಪ್ರಕಾರ ಅಮೆರಿಕದ ಬಜೆಟ್ ಕೊರತೆ 2.71 ಟ್ರಿಲಿಯನ್ ಡಾಲರ್ನಷ್ಟು(ಅಂದಾಜು 199 ಲಕ್ಷ ಕೋಟಿ) ಕೊರತೆ ಉಂಟಾಗಿದ್ದು, ಇದು ಅಮೆರಿಕದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಕೊರತೆ ಬಜೆಟ್ ಆಗಿದೆ ಎಂದು ಅಲ್ಲಿನ ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.
ಹಿಂದಿನ ಬಜೆಟ್ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ 11 ತಿಂಗಳಲ್ಲಿ ಸುಮಾರು ಶೇಕಡಾ 9.9ರಷ್ಟು ಕೊರತೆ ಬಜೆಟ್ ಇದಾಗಿದೆ. ಈ ಕೊರತೆಯ ಬಜೆಟ್ನ ಪ್ರಮಾಣ ಈ ಪ್ರಸ್ತುತ ಬಜೆಟ್ ವರ್ಷ ಮುಗಿಯುವುದರೊಳಗೆ 3 ಟ್ರಿಲಿಯನ್ ಡಾಲರ್ಗೆ ಏರಿಕೆ ಆಗಲೂಬಹುದು ಎಂದು ಕಾಂಗ್ರೆಶನಲ್ ಬಜೆಟ್ ಆಫೀಸ್ (Congressional Budget Office ) ಮುನ್ಸೂಚನೆ ನೀಡಿದೆ.
ಬರಾಕ್ ಒಬಾಮಾ ಅವರ ಅವಧಿಯಲ್ಲಿ ಅಂದರೆ 2009ರಲ್ಲಿ 1.4 ಟ್ರಿಲಿಯನ್ ಡಾಲರ್ ಕೊರತೆಯ ಬಜೆಟ್ ಇತ್ತು. ಹಿಂದಿನ ವರ್ಷದ ಬಜೆಟ್ ಕೊರತೆಗೆ ಹೋಲಿಸಿದರೆ, ಒಬಾಮಾ ಆಡಳಿತದ ಅವಧಿಗಿಂತ ಬಜೆಟ್ ಕೊರತೆ ದುಪ್ಪಟ್ಟಾಗಿದೆ. ಆಗ 2008 ಜಾಗತಿಕ ಆರ್ಥಿಕ ಮಹಾ ಕುಸಿತ ಅಮೆರಿಕವನ್ನ ಇನ್ನಿಲ್ಲದಂತೆ ಕಾಡಿತ್ತು.
ಈ 11 ತಿಂಗಳ ಬಜೆಟ್ ವರ್ಷದಲ್ಲಿ ಅಮೆರಿಕ ಸರ್ಕಾರದ ಆದಾಯ 3.39 ಟ್ರಿಲಿಯನ್ ಡಾಲರ್(249 ಲಕ್ಷ ಕೋಟಿ) ಇದೆ. ಹಿಂದಿನ ವರ್ಷಕ್ಕಿಂತ ಶೇಕಡಾ 17.7ರಷ್ಟು ಆದಾಯ ಜಾಸ್ತಿಯಾಗಿತ್ತು. ಕೋವಿಡ್ನಿಂದ ಸ್ವಲ್ಪ ಚೇತರಿಕೆ ಕಂಡಿದ್ದೇವೆ ಎನ್ನುವ ಸ್ಥಿತಿಯಲ್ಲಿ ಅಮೆರಿಕ ಇತ್ತು. ಆದರೆ ಕೋವಿಡ್ನಿಂದ ಚೇತರಿಕೆಗಾಗಿಯೂ ಕೂಡಾ ಸಾಕಷ್ಟು ಮೊತ್ತವನ್ನು ಅಮೆರಿಕ ಖರ್ಚು ಮಾಡಿತ್ತು ಇದರಿಂದಾಗಿ ಕೊರತೆಯ ಬಜೆಟ್ ಉಂಟಾಗಿತ್ತು.
ಏನಿದು ಕೊರತೆಯ ಬಜೆಟ್..?
ಸಾಮಾನ್ಯವಾಗಿ ಯಾವುದೇ ಸರ್ಕಾರವು ತನ್ನ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಬಜೆಟ್ ಅನ್ನು ಮಂಡಿಸಿದರೆ, ಅದು ಕೊರತೆಯ ಬಜೆಟ್ ಎಂದು ಹೇಳಲಾಗುತ್ತದೆ. ಈ ಬಜೆಟ್ನಲ್ಲಿ ತನ್ನಲ್ಲಾ ಆದಾಯದ ಮೂಲಗಳನ್ನು ಲೆಕ್ಕಹಾಕಿ, ಅದರಿಂದ ಬಂದ ಮೊತ್ತಕ್ಕಿಂತ ಹೆಚ್ಚಿನದಾಗಿ ಬಜೆಟ್ನಲ್ಲಿ ಖರ್ಚು ಮಾಡಲಾಗುತ್ತದೆ. ಈ ರೀತಿಯ ಬಜೆಟ್ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ಸಾಲಗಳ ಮೂಲಕ ಬಜೆಟ್ನಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ
ಮತ್ತೊಂದು ಉಳಿತಾಯ ಬಜೆಟ್ ಎಂಬ ಪರಿಕಲ್ಪನೆ ಇದ್ದು, ಈ ಬಜೆಟ್ನಲ್ಲಿ ತನ್ನ ಆದಾಯಕ್ಕಿಂತ ಕಡಿಮೆ ಮೊತ್ತದ ಬಜೆಟ್ ಅನ್ನು ಮಂಡನೆ ಮಾಡಲಾಗುತ್ತದೆ. ಈ ರೀತಿಯ ಉಳಿತಾಯ ಬಜೆಟ್ ಅನ್ನು ಸಾಮಾನ್ಯವಾಗಿ ಮುಂದುವರೆದ ರಾಷ್ಟ್ರಗಳು ಮಂಡನೆ ಮಾಡುತ್ತವೆ. ಆದರೆ, ಕೋವಿಡ್ ಪರಿಸ್ಥಿತಿಯಿಂದಾಗಿ ಎಲ್ಲ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಉಳಿತಾಯ ಬಜೆಟ್ ಅನ್ನು ಮಂಡನೆ ಮಾಡುವುದು ಅಮೆರಿಕದಂಥಹ ಅಮೆರಿಕಕ್ಕೇ ಕಷ್ಟವಾಗಿದೆ.