ವಾಷಿಂಗ್ಟನ್: ಕೊರೊನಾ ಕರಿಛಾಯೆ ಎಲ್ಲೆಡೆ ಹಬ್ಬುತ್ತಿದ್ದು, ಅಮೆರಿಕ ತನ್ನ ನಾಗರಿಕರಿಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಕಡಿಮೆ ಮಾಡುವಂತೆ ಹಾಗೂ ವಿದೇಶದಲ್ಲಿ ನೆಲೆಸಿರುವವರಿಗೆ ಆದಷ್ಟು ಬೇಗೆ ದೇಶಕ್ಕೆ ಮರಳಬೇಕಾಗಿ ಸಲಹೆ ನೀಡಿದೆ.
ಪ್ರಯಾಣಿಸುವುದರಿಂದ ತ್ವರಿತಗತಿಯಲ್ಲಿ ರೋಗ ಹರಡುವ ಹಿನ್ನಲೆಯಲ್ಲಿ, ಪ್ರಯಾಣವನ್ನು ಮುಂದೂಡುವಂತೆ ಅಮೆರಿಕ ತನ್ನ ನಿವಾಸಿಗಳಿಗೆ ಸಲಹೆ ನೀಡಿದೆ.
ನಾನಾ ಕಾರಣಗಳಿಂದ ಹೊರದೇಶಗಳಲ್ಲಿ ನೆಲೆಸಿರುವ ಅಮೆರಿಕ ನಾಗರಿಕರು ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿಲ್ಲಿಸಬೇಕು ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ. ಅಲ್ಲದೇ ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧ ಹೇರಿದ್ದು, ಆಗಮನ ಮತ್ತು ನಿರ್ಗಮನಕ್ಕಾಗಿ ನಿಯಮಾವಳಿಗಳನ್ನು ಅನುಷ್ಟಾನಗೊಳಿಸಿದೆ. ವಿಮಾನಯಾನ ಸಂಸ್ಥೆಗಳು ಅನೇಕ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ. ಇನ್ನೂ ಕೊರೊನಾವೈರಸ್ ಸರಿಸುಮಾರು 145 ದೇಶಗಳಲ್ಲಿ 210,300 ಕ್ಕೂ ಹೆಚ್ಚು ಜನರಿಗೆ ಹಬ್ಬಿದ್ದು, ಈವರೆಗೆ 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.