ವಾಷಿಂಗ್ಟನ್: ಕೋವಿಡ್ ವಿರುದ್ಧ ಹೋರಾಟದಲ್ಲಿ ಅಮೆರಿಕ ಇದೀಗ ಜಗತ್ತಿಗೆ 5.5 ಕೋಟಿ ಡೋಸ್ ಲಸಿಕೆ ವಿತರಣೆ ಮಾಡುವುದಾಗಿ ತಿಳಿಸಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಸೇರಿ 18 ರಾಷ್ಟ್ರಗಳಿಗೆ ನೆರವು ನೀಡುವುದಾಗಿ ಬೈಡನ್ ಸರ್ಕಾರ ತಿಳಿಸಿದೆ. ಈ ತಿಂಗಳ ಆರಂಭದಲ್ಲಿಯೇ 2.50 ಕೋಟಿ ಲಿಸಿಕೆಯನ್ನು ವಿತರಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಏಷ್ಯಾದ 18 ರಾಷ್ಟ್ರಗಳಾದ ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಮಾಲ್ಡೀವ್ಸ್ ಮತ್ತು ಭೂತಾನ್ ದೇಶಗಳಿಗೆ ಸೋಮವಾರ ಘೋಷಿಸಲಾದ 55 ಮಿಲಿಯನ್ (5.50 ಕೋಟಿ) ಲಸಿಕೆ ಪ್ರಮಾಣಗಳಲ್ಲಿ 16 ಮಿಲಿಯನ್ (1.60 ಕೋಟಿ) ಹಂಚಿಕೆ ಮಾಡಲಾಗಿದೆ. ಆದರೆ ಯಾವ ರಾಷ್ಟ್ರಕ್ಕೆ ಎಷ್ಟು ಪ್ರಮಾಣದ ಲಸಿಕೆ ನೀಡಲಾಗಿದೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಕೊರೊನಾಗೆ ಅಂತ್ಯ ಹಾಡುವ ಸಂಬಂಧ ಜುಲೈ ಅಂತ್ಯದ ವೇಳೆ ಜಗತ್ತಿಗೆ ಈ ಸಲಿಕೆ ಪೂರೈಸಲಾಗುವುದು ಎಂದು ಬೈಡನ್ ವಾಗ್ದಾನ ಮಾಡಿದ್ದರು.
ಇದರಲ್ಲಿ ಮಡರ್ನಾ, ಫೈಜರ್, ಜಾನ್ಸನ್ ಮತ್ತು ಜಾನ್ಸನ್ ಕೋವಿಡ್ ಲಸಿಕೆಗಳು ಒಳಗೊಂಡಿದ್ದು, ಅಸ್ಟ್ರಾಜೆನೆಕಾ ಲಸಿಕೆಯನ್ನು ಫಡರಲ್ ಅಧಿಕಾರಿಗಳು ವಿತರಣೆಗೆ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಅಲ್ಲದೇ ಇದರಲ್ಲಿ ಏಷ್ಯಾಕ್ಕೆ 1.60 ಕೋಟಿ, 1.40 ಕೋಟಿ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳಿಗೆ ಹಂಚಿಕೆಯಾಗಲಿದೆ.