ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಿದ್ದು, ದಾಖಲೆಯ ಸಂಖ್ಯೆಯಲ್ಲಿ ಪ್ರತಿನಿತ್ಯ ಸಾವು-ನೋವು ವರದಿಯಾಗುತ್ತಿದೆ. ಆಮ್ಲಜನಕ, ಹಾಸಿಗೆ, ಔಷಧಿಯಂತಹ ಕೊರತೆಯೊಂದಿಗೆ ದೇಶದ ವೈದ್ಯಕೀಯ ಕ್ಷೇತ್ರ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಅನೇಕ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಿದ್ದ ಭಾರತಕ್ಕೀಗ ಸಹಾಯಹಸ್ತ ಚಾಚುವ ಭರವಸೆಗಳನ್ನು ಕೆಲ ರಾಷ್ಟ್ರಗಳು ನೀಡಿವೆ.
ನಿನ್ನೆಯಷ್ಟೇ ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಒಕ್ಕೂಟ (EU) ಅಗತ್ಯಬಿದ್ದರೆ ಭಾರತಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದವು. ಇದೀಗ ಅಮೆರಿಕ ಹಾಗೂ ಇಂಗ್ಲೆಂಡ್ ಕೂಡ ಈ ನಿಟ್ಟಿನಲ್ಲಿ ಕೋವಿಡ್ ವಿರುದ್ಧ ಹೋರಾಡಲು ಬೆಂಬಲ ನೀಡುವುದಾಗಿ ಹೇಳಿವೆ.
ಭಾರತದಲ್ಲಿನ ಕೋವಿಡ್ ಪರಿಸ್ಥಿತಿಯು ಜಾಗತಿಕ ಕಾಳಜಿಯಾಗಿದ್ದು, ಇದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಸಾಂಕ್ರಾಮಿಕವನ್ನು ಎದುರಿಸುತ್ತಿರುವ ನಮ್ಮ ಭಾರತೀಯ ಸ್ನೇಹಿತರನ್ನು ನೋಡಿದರೆ ಇದು ಭಾರತದ ಜನರ ಮೇಲೆ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಹಾಗೂ ಪ್ರಪಂಚದ ಎಲ್ಲೆಡೆ ಪರಿಣಾಮ ಬೀರಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.
ಇದನ್ನೂ ಓದಿ: ಕೋವಿಡ್ ಆತಂಕ: ಭಾರತ, ಪಾಕಿಸ್ತಾನ ವಿಮಾನಗಳಿಗೆ ಕೆನಡಾ ನಿರ್ಬಂಧ
ಅಗತ್ಯ ಸಾಮಗ್ರಿಗಳ ಚಲನೆಗೆ ಅನುಕೂಲವಾಗುವಂತೆ ಮತ್ತು ಅವುಗಳ ಪೂರೈಕೆ ಸರಪಳಿಗಿರುವ ಅಡಚಣೆಯನ್ನು ಪರಿಹರಿಸಲು ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಕೊರೊನಾ ವಿರುದ್ಧ ಭಾರತ ಉನ್ನತ ಮಟ್ಟದಲ್ಲಿ ಹೋರಾಡಲು ನಮ್ಮ ಸಹಕಾರ ಮುಂದುವರಿಸುತ್ತೇವೆ ಎಂದು ಇಲಾಖೆ ತಿಳಿಸಿದೆ.
ಭಾರತವು ಆರೋಗ್ಯ ಸೇವೆಗಳು ನಿಭಾಯಿಸಲು ಹೋರಾಡುತ್ತಿದೆ. ಕೊರೊನಾ ಸಾಂಕ್ರಾಮಿಕವು ಮಾರಣಾಂತಿಕ ಹೊಸ ಹಂತವನ್ನು ಪ್ರವೇಶಿಸುತ್ತಿರುವ ಭಾರತಕ್ಕೆ ಸಹಾಯ ಮಾಡಲು ಏನು ಮಾಡಬಹುದೆಂದು ಯೋಚಿಸುತ್ತಿದ್ದೇನೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.