ವಾಷಿಂಗ್ಟನ್: ಕೋವಿಡ್ ಆರಂಭದ ಕಷ್ಟದ ಸಮಯದಲ್ಲಿ ಯುಎಸ್ಗೆ ಸಹಾಯ ಮಾಡಿದ್ದ ಭಾರತ ಇದೀಗ ಎರಡನೇ ಅಲೆಯಲ್ಲಿ ಸಿಲುಕಿ ಸಂಕಷ್ಟದಲ್ಲಿದೆಯೆಂದು ವಿಶ್ವದ ದೊಡ್ಡಣ್ಣ ಬೆಂಬಲಕ್ಕೆ ನಿಂತಿದೆ. ಅಧ್ಯಕ್ಷ ಜೋ ಬೈಡೆನ್ - ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಡಳಿತವು ಭಾರತಕ್ಕೆ ತುರ್ತು ಕೋವಿಡ್ ಸಹಾಯವನ್ನು ನೀಡುತ್ತಿದೆ.
ಸಾಂಕ್ರಾಮಿಕ ಆರಂಭದಿಂದ ಇಲ್ಲಿಯವರೆಗೆ 10 ಮಿಲಿಯನ್ ಭಾರತೀಯರಿಗೆ ನೆರವಾಗುವಂತೆ 23 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಿರುವ ಅಮೆರಿಕ ಮುಂದಿನ ದಿನಗಳಲ್ಲಿ 100 ಮಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಪೂರೈಸಲಿದೆ ಎಂದು ಶ್ವೇತಭವನ ತಿಳಿಸಿದೆ.
'ನೆರವು ವಿಮಾನಗಳು'
ಇಂದಿನಿಂದ ಆಕ್ಸಿಜನ್ ಸಿಲಿಂಡರ್‌ಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಉತ್ಪಾದನಾ ಘಟಕಗಳು, ಪಿಪಿಇ ಕಿಟ್ಗಳು, ಲಸಿಕೆ -ಉತ್ಪಾದನಾ ಕಚ್ಚಾ ವಸ್ತುಗಳು, ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳು, ವೆಂಟಿಲೇಟರ್‌ಗಳು ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಅಮೆರಿಕ ಸರ್ಕಾರದ 'ನೆರವು ವಿಮಾನಗಳು' ಭಾರತಕ್ಕೆ ಬರಲಿವೆ. ಮೊದಲ ಹಾರಾಟದಲ್ಲೇ 1,00,000 ಮಾಸ್ಕ್ಗಳು ಹಾಗೂ 9,60,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳನ್ನು ಕಳುಹಿಸುತ್ತಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತಕ್ಕೆ 5 ಟನ್ ಆಮ್ಲಜನಕ ಸಾಂದ್ರಕ ಕಳುಹಿಸಿದ ಅಮೆರಿಕ
ಭಾರತಕ್ಕೆ ಯುಎಸ್ ನೀಡುತ್ತಿರುವ ಕೋವಿಡ್ ನೆರವು
- ಆರಂಭದಲ್ಲಿ 1,100 ಆಕ್ಸಿಜನ್ ಸಿಲಿಂಡರ್ಗಳ ಭರವಸೆ - ಈಗಾಗಲೇ ವಿಶ್ವದ ಅತಿದೊಡ್ಡ ಮಿಲಿಟರಿ ವಿಮಾನದಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿರುವ ಕ್ಯಾಲಿಫೋರ್ನಿಯಾ ರಾಜ್ಯ
- 1700 ಆಮ್ಲಜನಕ ಸಾಂದ್ರಕಗಳು - ಈಗಾಗಲೇ ಐದು ಟನ್ (5000 ಕೆಜಿ) ಆಮ್ಲಜನಕ ಸಾಂದ್ರಕಗಳು ಭಾರತಕ್ಕೆ ಬಂದಿವೆ
- ಆಮ್ಲಜನಕ ಉತ್ಪಾದನಾ ಘಟಕಗಳು
- ರೋಗಿಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗಾಗಿ 15 ಮಿಲಿಯನ್ N95 ಮಾಸ್ಕ್ಗಳನ್ನೊಳಗೊಂಡ ಪಿಪಿಇ ಕಿಟ್ಗಳು
- ಲಸಿಕೆ ತಯಾರಿಸಲು ತುರ್ತಾಗಿ ಅಗತ್ಯವಿರುವ ಕಚ್ಚಾ ವಸ್ತುಗಳು - ಇದು 20 ಮಿಲಿಯನ್ ವ್ಯಾಕ್ಸಿನ್ ಡೋಸ್ಗಳನ್ನ ಭಾರತದಲ್ಲಿ ತಯಾರಿಸಲು ಸಹಕಾರಿಯಾಗಲಿದೆ
- 15 ನಿಮಿಷಗಳಲ್ಲಿ ಸೋಂಕು ಪತ್ತೆಹಚ್ಚುವ ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಸಾಧನಗಳು (RDTs)
- 20,000 ರೆಮ್ಡೆಸಿವಿರ್ ಚುಚ್ಚುಮದ್ದು
ಅಭೂತಪೂರ್ವ ಕೋವಿಡ್-19 ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ಅಗತ್ಯ ಸಮಯದಲ್ಲಿ ಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ. ಸಾಂಕ್ರಾಮಿಕದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳು ತೊಂದರೆಗೊಳಗಾಗಿದ್ದಾಗ ಭಾರತ ಸಹಾಯ ಮಾಡಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ನಮಗಾಗಿ ಇತ್ತು, ಇದೀಗ ನಾವು ಅವರಿಗಾಗಿ ಇರುತ್ತೇವೆ: ಅಮೆರಿಕ ಅಧ್ಯಕ್ಷರ ವಾಗ್ದಾನ
ಕೋವಿಡ್ ವಿರುದ್ಧದ ಭಾರತದ ಹೋರಾಟದಲ್ಲಿ ಭಾರತದೊಂದಿಗೆ ನಾವು ಜೊತೆಯಾಗಿ ನಿಲ್ಲುತ್ತೇವೆ. ಭಾರತದ ಜನರಿಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ನಿರ್ಧರಿಸಿದೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಭಾರತದಲ್ಲಿ ದಾಖಲೆಯ ಕೊರೊನಾ ಸಾವು-ನೋವು
ದಾಖಲೆಯ ಸಂಖ್ಯೆಯಲ್ಲಿ ಭಾರತದಲ್ಲಿ ಕೋವಿಡ್ ಸಾವು-ನೋವು ಸಂಭವಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆಯೊಂದಿಗೆ ಅನೇಕ ಸೋಂಕಿತರು ರಸ್ತೆ ಮೇಲೆ ಪ್ರಾಣಬಿಡುವ ದುಸ್ಥಿತಿ ಒದಗಿ ಬಂದಿದೆ. ನಿನ್ನೆ ಬಂದಿದ್ದ ಕಳೆದ 24 ಗಂಟೆಗಳ ವರದಿಯಲ್ಲಿ 3,60,960 ಹೊಸ ಕೇಸ್ಗಳು ಹಾಗೂ 3,293 ಸಾವು ದಾಖಲಾಗಿತ್ತು. ಈವರೆಗೆ ಒಟ್ಟು 1,79,97,267 ಸೋಂಕಿತರು ಪತ್ತೆಯಾಗಿದ್ದು, 2,01,187 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಲಸಿಕೆ ತಯಾರಿಸಲು ಭಾರತಕ್ಕೆ ಕಚ್ಚಾ ವಸ್ತು ಪೂರೈಸಲು ಅಮೆರಿಕ ನಿರ್ಧಾರ