ವಾಷಿಂಗ್ಟನ್: ಕೋವಿಡ್19ನಿಂದ ಕಂಗೆಟ್ಟಿರುವ ವಿಶ್ವದ ದೊಡ್ಡಣ್ಣ ಅಮೆರಿಕಾ ಕಠಿಣ ನಿರ್ಧಾರಗಳಿಗೆ ಮುಂದಾಗಿದೆ. ಅಮೆರಿಕಾಗೆ ಬರುವ ವಲಸಿಗರ ವೀಸಾವನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಲಿದ್ದಾರೆ.
ಈ ಬಗ್ಗೆ ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕಾಗೆ ವಲಸಿಗರು ಪ್ರವೇಶಿಸುವುದಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರುವ ಎಕ್ಸಿಕ್ಯೂಟಿವ್ ಆದೇಶಕ್ಕೆ ಸಹಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಯಾವಾಗ ಎಂಬುದನ್ನು ಸ್ಪಷ್ಟಪಡಿಸಿಲ್ಲ. ವಲಸಿಗ ವೀಸಾ, ಹೆಚ್-1ಬಿ ವೀಸಾ ಟ್ರಂಪ್ ಅವರ ಟಾರ್ಗೆಟ್ ಆಗಿದೆ. ಹೆಚ್-1ಬಿ ವೀಸಾ ಭಾರತೀಯ ಐಟಿ ಉದ್ಯೋಗಿಗಳಿಗೆ ಅವಶ್ಯಕವಾಗಿತ್ತು. ತನ್ನ ಪ್ರಜೆಗಳಿಗೆ ಉದ್ಯೋಗ ಒದಗಿಸುವ ಸಲುವಾಗಿ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೋವಿಡ್19ನಿಂದಾಗಿ ಅಮೆರಿಕಾದಲ್ಲಿ ಏಪ್ರಿಲ್ 2ನೇ ವಾರದ ವೇಳೆಗೆ ದಾಖಲೆಯ ಮಟ್ಟದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. 2 ಕೋಟಿ 20 ಲಕ್ಷ ಜನ ನಿರುದ್ಯೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕಾದ ಉತ್ತರ ಮತ್ತು ದಕ್ಷಿಣದ ಗಡಿಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಈ ಮಾರ್ಗಗಳಿಂದ ಅಕ್ರಮವಾಗಿ ವಲಸಿಗರು ಪ್ರವೇಶ ಮಾಡುತ್ತಿದ್ದರು. ಭಾರತ ಸೇರಿದಂತೆ ಹಲವು ದೇಶಗಳಿಂದ ಪ್ರಯಾಣವನ್ನು ರದ್ದು ಮಾಡಲಾಗಿದೆ. ಹೊಸದಾಗಿ ನೀಡಲಿರುವ ಹೆಚ್-1ಬಿ ವೀಸಾದ ಮೇಲೆ ಇದು ಪರಿಣಾಮ ಬೀರಲಿದೆ.
ವಿಶ್ವದ ನಾನಾ ಭಾಗಗಳಿಂದ ಅಮೆರಿಕಾಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಕಳೆದ ತಿಂಗಳು ಬಂದ್ ಮಾಡಲಾಗಿದೆ. ಮಹಾಮಾರಿ ಕೊರೊನಾ ವೈರಸ್‌ಗೆ ಅಮೆರಿಕಾದಲ್ಲಿ ಈಗಾಗಲೇ 40,094 ಮಂದಿ ಮೃತಪಟ್ಟಿದ್ದಾರೆ. 7,50,00 ಜನರಿಗೆ ಸೋಂಕು ದೃಢ ಪಟ್ಟಿದೆ.