ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ (WHO) ಮೇಲೆ ನಡೆಸಿದ್ದ ವಾಗ್ದಾಳಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. WHO ಗೆ ಹಣಕಾಸು ನೆರವು ನೀಡುವ ಬಗ್ಗೆ ಅಮೆರಿಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಬುಧವಾರ, ಟ್ರಂಪ್ ತಮ್ಮ ದೈನಂದಿನ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಸಂಘಟನೆಗಳು 'ಚೀನಾ ಕೇಂದ್ರಿತ' ಎಂದು ಆರೋಪಿಸಿ, ವಿಶ್ವ ಆರೋಗ್ಯ ಸಂಘಟನೆ(WHO)ಗೆ ಅಮೆರಿಕಾ ನೀಡುವ ಹಣಕಾಸಿನ ನೆರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಏಕಾಏಕಿ ಕೊರೊನಾ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಕೆಲ ತಿಂಗಳುಗಳ ಹಿಂದೆ ಬೀಜಿಂಗ್ ತೆಗೆದುಕೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುತ್ತಿದೆ.
ಹೀಗಾಗಿ ವಿಶ್ವ ಆರೋಗ್ಯ ಸಂಘಟನೆಯ ಕ್ರಮಕ್ಕೆ ಆಕ್ರೋಶಗೊಂಡು ಅಮೆರಿಕದಿಂದ ಸಂಘಟನೆಗೆ ನೀಡುವ ಹಣವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಚೀನಾ ನೀಡಿದ ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಅಲ್ಲಿ ವೈರಸ್ನಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲು ಹಲವಾರು ಕಾರಣಗಳಿದ್ದರೂ, ವೈರಸ್ ವಿಚಾರವಾಗಿ ಚೀನದ ಪಾರದರ್ಶಕತೆಯನ್ನು WHO ಶ್ಲಾಘಿಸಿದೆ ಎಂದು ಹೇಳಿದ್ದರು.
ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಟ್ರಂಪ್ ಈಗ ಯೂಟರ್ನ್ ಹೊಡೆದಿದ್ದು, ಈ ಬಗ್ಗೆ ಅಮೆರಿಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.